ನವದೆಹಲಿ: ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ದೂರಸಂಪರ್ಕ ಸಂಸ್ಥೆ 'ಭಾರತ್ ಸಂಚಾರ ನಿಗಮ ಲಿಮಿಟೆಡ್' (ಬಿಎಸ್ಎನ್ಎಲ್) ಕಳೆದ ಕೆಲವು ವರ್ಷಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, 1.76 ಲಕ್ಷ ಉದ್ಯೋಗಿಗಳಿಗೆ ಫೆಬ್ರವರಿ ತಿಂಗಳ ವೇತನ ಪಾವತಿ ಆಗಿಲ್ಲ ಎನ್ನಲಾಗುತ್ತಿದೆ.
ಆರಂಭವಾದ ಇಷ್ಟೂ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಸ್ಥೆಯು ತನ್ನ ಸಿಬ್ಬಂದಿಗೆ ವೇತನ ಪಾವತಿಸಲು ವಿಫಲವಾಗಿದೆ. ಉದ್ಯೋಗಿಗಳ ಒಕ್ಕೂಟವು ದೂರಸಂರ್ಪಕ ಸಚಿವ ಮನೋಜ್ ಸಿನ್ಹಾ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದು, 'ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ಸಂಸ್ಥೆಯನ್ನು ಪುನರ್ಜ್ಜೀವನಗೊಳಿಸಿ ಉದ್ಯೋಗಿಗಳ ವೇತನ ಪಾವತಿಸಲು ಅನಕೂಲ ಮಾಡಿಕೊಡುವಂತೆ' ಕೋರಿದ್ದಾರೆ.
ಟೆಲಿಕಾಂ ಮಾರುಕಟ್ಟೆಯ ದರ ಸಮರ ಬಿಎಸ್ಎನ್ಎಲ್ ಅನ್ನು ನುಂಗಿ ಹಾಕುತ್ತಿದೆ. ಕಡಿಮೆ ದರದ ಡೇಟಾ ಹಾಗೂ ಕರೆ ಶುಲ್ಕದ ಜಿಯೋ ದೊಡ್ಡ ಸವಾಲಾಗಿದೆ. ಪ್ರಸ್ತುತ ಬಿಎಸ್ಎನ್ಎಲ್ ತೀವ್ರವಾದ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆ. ಆದಾಯವಿಲ್ಲದೇ ಬೃಹತ್ ಪ್ರಮಾಣದ ಹಣ ಪಾವತಿಯ ಮೂಲಕ ದಿವಾಳಿತನದಿಂದ ತಪ್ಪಿಸಿಕೊಳ್ಳುವ ಯತ್ನ ನಡೆಯುತ್ತಿದೆ ಎಂದು ಬಿಎಸ್ಎನ್ಎಲ್ ಸಂಘ ತಿಳಿಸಿದೆ.
ಕೇರಳ, ಜಮ್ಮು ಮತ್ತು ಕಾಶ್ಮೀರ, ಒಡಿಶಾ ಹಾಗೂ ಸಾಂಸ್ಥಿಕ ಕಚೇರಿಯ ಸಿಬ್ಬಂದಿಗೆ ಫೆಬ್ರವರಿ ತಿಂಗಳ ವೇತನ ಪಾವತಿಸಲು ಆರಂಭಿಸಲಾಗಿದೆ. ಆದಾಯದ ಪ್ರಮಾಣ ಹೆಚ್ಚಾದಾಗ ವೇತನ ಪಾವತಿ ಸರಳವಾಗುತ್ತದೆ. ಸರ್ಕಾರದ ಯಾವುದೇ ರೀತಿಯ ಹಣಕಾಸಿನ ಬೆಂಬಲ ನೀಡದ ಕಾರಣ ವೇತನ ಪಾವತಿ ವಿಳಂಬವಾಗುತ್ತಿದೆ ಎಂದು ಬಿಎಸ್ಎನ್ಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಸ್ಎನ್ಎಲ್ ನಷ್ಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ವರದಿ ಪ್ರಕಾರ ಸುಮಾರು ₹ 8 ಸಾವಿರ ಕೋಟಿಯಷ್ಟು ನಷ್ಟ ಎದುರಾಗಿದೆ. 2017ರ ಆರ್ಥಿಕ ವರ್ಷದಲ್ಲಿ ₹ 4,786 ಕೋಟಿ, 2018ರಲ್ಲಿ ₹ 8 ಸಾವಿರ ಕೋಟಿ ಹಾಗೂ 2019ರಲ್ಲಿಯೂ ₹ 8,000 ಕೋಟಿಯಷ್ಟು ನಷ್ಟ ಅಂದಾಜಿಸಲಾಗಿದೆ.