ನವದೆಹಲಿ: ಬಳಕೆದಾರರ ವಿಚಾರದಲ್ಲಿ ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರಿ ನಷ್ಟ ಅನುಭವಿಸಿದೆ. ಈ ಬಗ್ಗೆ ಕಂಪೆನಿ ಅಧಿಕೃತವಾಗಿ ಹೇಳಿಕೊಂಡಿದೆ.
ಭಾರ್ತಿ ಏರ್‌ಟೆಲ್ ಎರಡನೇ ತ್ರೈಮಾಸಿಕದಲ್ಲಿ ಬರೋಬ್ಬರಿ 24 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ. ದಿಗ್ಗಜ ಕಂಪನಿ ರಿಲಯನ್ಸ್ ಜಿಯೋದೊಂದಿಗೆ ದರ ಸಮರಕ್ಕಿಳಿದ ಪರಿಣಾಮ ಇಷ್ಟೊಂದು ನಷ್ಟ ಅನುಭವಿಸಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿ 118 ಕೋಟಿ ರೂ. ಲಾಭ ಪಡೆದಿತ್ತು. ಇದರೊಂದಿಗೆ ಕಂಪೆನಿ ನಷ್ಟ ಒಟ್ಟು ನಿರ್ವಹಣಾ ಲಾಭದ ಶೇ.4.9ರಷ್ಟು ಹೆಚ್ಚಳವಾಗಿದೆ. ಇದು ಸೆಪ್ಟೆಂಬರ್‌ನಲ್ಲಿ 21,131 ಕೋಟಿ ರೂ. ಆಗಿದೆ.
ಟೆಲಿಕಾಂ ಕಂಪೆನಿಗಳು ಸರ್ಕಾರದ ಟೆಲಿಕಾಂ ಇಲಾಖೆಗೆ 92 ಸಾವಿರ ಕೋಟಿ ರೂ. ಪಾವತಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ ಬೆನ್ನಲ್ಲೇ ಏರ್‌ಟೆಲ್ ನಷ್ಟದ ವಿಚಾರ ಬಹಿರಂಗವಾಗಿದೆ. ವೊಡಾಫೋನ್ ಸಂಸ್ಥೆ ಸಹ ಭಾರಿ ನಷ್ಟದಲ್ಲಿದ್ದು, ಭಾರತದಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸುವ ಚಿಂತನೆ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.