ನವದೆಹಲಿ: ಕಳೆದ ತಿಂಗಳು ಜನವರಿ 31 ಮತ್ತು ಫೆಬ್ರವರಿ 1ರಂದು ಎರಡು ದಿನಗಳ ಬ್ಯಾಂಕ್ ನೌಕರರ ಮುಷ್ಕರ ನಡೆಸಿದ ಬಳಿಕ ಮತ್ತೊಂದು ಸುತ್ತಿನ ಪ್ರತಿಭಟನೆಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳ ಒಕ್ಕೂಟ ನಿರ್ಧರಿಸಿವೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಾಗ ಪ್ರತಿಭಟನೆಗಳನ್ನು ನಡೆಸಿಕೊಂಡು ಬರುತ್ತಿರುವ ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ, ಈಗ ಮಾರ್ಚ್ ಎರಡನೇ ವಾರದಲ್ಲಿ ಮತ್ತೆ ಮುಷ್ಕರಕ್ಕೆ ಕರೆ ನೀಡಲಿದೆ. ಒಂದು ವೇಳೆ ಈ ಮುಷ್ಕರ ಯಶಸ್ವಿಯಾದರೆ ವಿವಿಧ ಬ್ಯಾಂಕ್ ಮತ್ತು ಎಟಿಎಂಗಳು ಸತತ ಐದು ದಿನಗಳ ಕಾಲ ಸಾರ್ವಜನಿಕರಿಗೆ ಸೇವೆ ನೀಡುವುದಿಲ್ಲ.
ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್ಐ) ಹಾಗೂ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ (ಎಐಬಿಇಎ), ದೇಶಾದ್ಯಂತ ಮಾರ್ಚ್ 11ರಿಂದ 13ರವರೆಗೆ 3 ದಿನಗಳ ಕಾಲ ಬ್ಯಾಂಕ್ ಬಂದ್ಗೆ ಕರೆ ನೀಡಿದೆ. ಭಾರತೀಯ ಬ್ಯಾಂಕ್ಗಳ ಒಕ್ಕೂಟ (ಐಬಿಎ) ನೂತನ ವೇತನ ಪರಿಷ್ಕರಣೆಯ ಮಾತುಕತೆ ವಿಫಲವಾದ ಪ್ರಯುಕ್ತ ಪ್ರತಿಭಟನೆಗೆ ಮುಂದಾಗಿದೆ.
ಮೂರು ದಿನ ಮುಷ್ಕರದ ಬಳಿಕ ತಿಂಗಳ ಎರಡನೆ ಶನಿವಾರ ಹಾಗೂ ಭಾನುವಾರ ಸೇರಿ ಒಟ್ಟು ಐದು ದಿನಗಳ ಕಾಲ ಬ್ಯಾಂಕ್ಗಳ ಹಣಕಾಸು ಸೇವೆಯಲ್ಲಿ ತೊಡಕಾಗಲಿದೆ. ಐಸಿಐಸಿಐ, ಎಚ್ಡಿಎಫ್ಸಿನಂತಹ ಖಾಸಗಿ ಬ್ಯಾಂಕ್ಗಳ ಸೇವೆಯಲ್ಲಿ ಯಾವುದೇ ವಿಧದ ವ್ಯತ್ಯಯ ಕಂಡುಬರುವುದಿಲ್ಲ.