ನವದೆಹಲಿ: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ, ಬಡ ಹಾಗೂ ಅಸಂಘಟಿತ ನೌಕರರ ಕಲ್ಯಾಣಕ್ಕೆ ರೂಪಿಸಿರುವ ಅಟಲ್ ಪಿಂಚಣಿ ಯೋಜನೆಯ (ಎಪಿವೈ) ಚಂದಾದರ ಪಡೆಯುವಿಕೆ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್ಡಿಎ) ಅಡಿ 2015ರಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು.
ಯೋಜನೆಯ ಪಾವತಿ ಮತ್ತು ಉಪಯೋಗ
* 60ನೇ ವಯಸ್ಸಿಗೆ ಎಷ್ಟು ಪಿಂಚಣಿ ಬೇಕೆಂದು ಬಯಸುವವರು ಪಿಂಚಣಿಗನುಗುಣವಾಗಿ ಹೂಡಿಕೆ ಮಾಡಬೇಕಾಗಿದೆ. ಮಾಸಿಕ, ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಅನುಸಾರವಾಗಿ ₹ 1,000, ₹ 2,000, ₹ 3,000, ₹ 4,000 ಹಾಗೂ 5,000 ಪಾವತಿಸಬಹುದು.
* 18ರ ವಯೋಮಾನದವರು ತಮ್ಮ 60ನೇ ವಯಸ್ಸಿಗೆ ₹ 1,000 ಪಿಂಚಣಿ ಪಡೆಯಲು ಇಚ್ಛಿಸಿದರೇ ಮಾಸಿಕ ₹ 42, ₹ 2,000ಕ್ಕೆ ₹ 84, ₹ 3,000ಕ್ಕೆ ₹126, ₹ 4000ಕ್ಕೆ ₹ 168 ಮತ್ತು ₹ 5000ಕ್ಕೆ ₹ 210 ಪ್ರಸ್ತುತ ದಿನಗಳಿಂದ ಸತತ 42 ವರ್ಷಗಳ ಕಾಲ ಪಾವತಿಸಬೇಕಾಗುತ್ತದೆ.
* 30 ವರ್ಷದ ವ್ಯಕ್ತಿಯು ತನ್ನ 60ನೇ ವಯಸ್ಸಿಗೆ ₹ 1000 ಪಿಂಚಣಿ ಬೇಕಾದಲ್ಲಿ ₹ 116, ₹ 2,000ಕ್ಕೆ ₹ 231, ₹ 3,000ಕ್ಕೆ ₹ 347, ₹ 4,000ಕ್ಕೆ ₹ 462 ಮತ್ತು ₹ 5,000ಕ್ಕೆ ₹ 577 ಇಂದಿನಿಂದಲೇ ಮಾಸಿಕ ಪಾವತಿಸಬೇಕು.
* ಆರಂಭದ 18 ವರ್ಷ ವಯಸ್ಸಿನವರು ನಿರಂತರವಾಗಿ 42 ವರ್ಷ ಪಾವತಿಸಬೇಕು. 40 ವರ್ಷದವರು 20 ವರ್ಷಗಳವರೆಗೆ ನಿರಂತರವಾಗಿ ಪಾವತಿಸಬೇಕು. 60ನೇ ವರ್ಷದ ಬಳಿಕ ಪಿಂಚಣಿ ಹಣ ಬರುತ್ತದೆ.
ಅರ್ಜಿ ಸಲ್ಲಿಕೆಯ ವಿಧಾನ
* ಅಟಲ್ ಪಿಂಚಣಿ ಯೋಜನೆಯ ಅರ್ಜಿಗಳು ಎಲ್ಲ ರಾಷ್ಟ್ರೀಕೃತ ಬ್ಯಾಂಕ್ಗಳ ಶಾಖೆಗಲ್ಲಿ ಲಭ್ಯವಿರುತ್ತವೆ. ಬ್ಯಾಂಕ್ ಶಾಖೆಗಳಲ್ಲದೆ ಅಂಚೆ ಇಲಾಖೆಗಳಲ್ಲಿ ಸಿಗುತ್ತವೆ.
* ಬ್ಯಾಂಕ್ ಶಾಖೆ ಹಾಗೂ ಬ್ಯಾಂಕ್ಗಳ ವೆಬ್ಸೈಟ್ಗಳಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಅರ್ಜಿಗಳು ಕನ್ನಡ, ಇಂಗ್ಲಿಷ್, ಬೆಂಗಾಲಿ, ತಮಿಳು, ತೆಲುಗು, ಮರಾಠಿ, ಓಡಿಯಾ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯ ಇವೆ.
* ಅರ್ಜಿಯಲ್ಲಿ ಕೇಳಲಾದ ಮಾಹಿತಿಯನ್ನು ಅರ್ಜಿದಾರರು ಭರ್ತಿ ಮಾಡಿ ಆಯಾ ಬ್ಯಾಂಕ್ಗಳಿಗೆ ಸಲ್ಲಿಸಬೇಕು.
* ಚಂದಾದಾರರು ತಮ್ಮ ಮೊಬೈಲ್ ಸಂಖ್ಯೆ, ಫೋಟೋ ಜೊತೆಗೆ ಆಧಾರ್ ಕಾರ್ಡ್ ಮಾಹತಿ ನೀಡಬೇಕು
* ಒಮ್ಮೆ ಎಪಿವೈ ಅರ್ಜಿ ಸ್ವೀಕೃತವಾದರೆ ತಕ್ಷಣದಲ್ಲಿ ದೃಢೀಕರಣ ಸಂಖ್ಯೆಯ ಸಂದೇಶ ನೀವು ಕೊಟ್ಟ ಮೊಬೈಲ್ ನಂಬರ್ಗೆ ಬರುತ್ತದೆ.