ನವ ದೆಹಲಿ: ತೆರಿಗೆ ವಂಚಕರ ವಿರುದ್ಧ ಸಮರ ಸಾರಿರುವ ಜಿಎಸ್‌ಟಿ ಅಧಿಕಾರಿಗಳು 8 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 2020-21ರ ಹಣಕಾಸು ವರ್ಷದಲ್ಲಿ ನಕಲಿ ಇನ್‌ವಾಯ್ಸ್ ಸೃಷ್ಟಿಸಿ 35 ಕೋಟಿ ಮೊತ್ತದ ಜಿಎಸ್‌ಟಿ ಇನ್‌ಪುಟ್ ಟ್ಯಾಕ್ಸ್ ಕ್ರಿಡಿಟ್(ಐಟಿಸಿ) ವಂಚಿಸಿರುವ ಡೀಲರ್‌ಗಳು, ಲೆಕ್ಕ ಪರಿಶೋಧಕರು ಹಲವು ಕಂಪನಿಗಳ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನಕಲಿ ಜಿಎಸ್‌ಟಿ ವಿತರಕರ ವಿರುದ್ಧ ದೇಶಾದ್ಯಂತ ಕಾರ್ಯಾಚರಣೆ ನಡೆಸಲಾಗಿತ್ತು. ಕೋವಿಡ್‌ನ 2ನೇ ಅಲೆಯ ಲಾಕ್‌ಡೌನ್ ಹೊರತಾಗಿಯೂ ಸತತ 8 ತಿಂಗಳು 1 ಲಕ್ಷಕ್ಕೂ ಅಧಿಕ ಜಿಎಸ್‌ಟಿ ಸಂಗ್ರಹವಾಗುತ್ತಿತ್ತು. ಆದರೆ ಜೂನ್‌ನಲ್ಲಿ 92,849 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಿತ್ತು.
ಇನ್‌ಪುಟ್ ಟ್ಯಾಕ್ಸ್ ಕ್ರಿಡಿಟ್(ಐಟಿಸಿ) ನಿಬಂಧನೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಜಿಎಸ್‌ಟಿ ಅಡಿಯಲ್ಲಿ ತೆರಿಗೆ ವಂಚನೆ ಸಾಮಾನ್ಯವಾಗಿದ್ದು, ತೆರಿಗೆ ಅಧಿಕಾರಿಗಳು ನಿರಂತರವಾಗಿ ಇಂತಹ ವಂಚನೆಗಳನ್ನು ಪತ್ತೆ ಮಾಡುತ್ತಾರೆ. 14 ಮಂದಿ ವೃತ್ತಿಪರ ಸಿಎಗಳು, ವಕೀಲರು, ಮಾಸ್ಟರ್ ಮೈಂಡ್‌ಗಳು, ವಂಚನೆಯ ಫಲಾನುಭವಿಗಳು ಹಾಗೂ ನಿರ್ದೇಶಕರು ಸೇರಿದಂತೆ ಈ ವರ್ಷದಲ್ಲಿ 426 ಮಂದಿಯನ್ನು ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಇತ್ತೀಚೆಗೆ 8 ಕೋಟಿ ಮೌಲ್ಯದ ಕಾರು ಕೊಂಡಿದ್ದ ಬಿಲ್ಡರ್ ವಿರುದ್ಧ ದಾಖಲಾಯ್ತು ವಿದ್ಯುತ್ ಕಳವು ಕೇಸ್
ವಂಚಕರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಕಳೆದ ವರ್ಷ ನವೆಂಬರ್ 2ನೇ ವಾರದಲ್ಲಿ ಪ್ರಾರಂಭವಾಗಿತ್ತು. ಕೋವಿಡ್ ಸುರಕ್ಷತೆಯ ಕಾರಣದಿಂದ ಎರಡು-ಮೂರು ತಿಂಗಳು ಈ ಕಾರ್ಯ ನಿಧಾನವಾಗಿತ್ತು ಸಾಗಿತ್ತು. ಇದೀಗ ರಾಷ್ಟ್ರಮಟ್ಟದಲ್ಲಿ ವಂಚಕರನ್ನು ಪತ್ತೆ ಹಚ್ಚುವ ಕಾರ್ಯ ಚುರುಕುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 1,200 ಘಟಕಗಳನ್ನು ಒಳಗೊಂಡ 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇ ವರ್ಷ 24 ಮಂದಿಯನ್ನು ಬಂಧಿಸಲಾಗಿದೆ.
ವಂಚಕರ ಪತ್ತೆಗೆ ಸಿಬಿಐಸಿ ಅಧಿಕಾರಿಗಳು ಇತ್ತೀಚಿನ ಐಟಿ ಪರಿಕರಗಳು, ಡಿಜಿಟಲ್ ಪುರಾವೆಗಳು ಮತ್ತು ಇತರ ಸರ್ಕಾರಿ ಇಲಾಖೆಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಅಧಿಕಾರಗಳ ಕಾರ್ಯಾಚರಣೆ ವೇಳೆ ಕೆಲ ಪ್ರಸಿದ್ಧ ಕಂಪನಿಗಳ ವಿರುದ್ಧವೂ ನಕಲಿ ಐಟಿಸಿ ದಾಖಲೆಗಳನ್ನು ಸೃಷ್ಟಿಸಿರುವ ಆರೋಪದಲ್ಲಿ ಪ್ರಕರಣಗಳನ್ನು ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.