ಹುಬ್ಬಳ್ಳಿ: ಕೋವಿಡ್-19 ಲಾಕ್ಡೌನ್ ಸಡಿಲಿಕೆ ನಂತರ ಸರ್ಕಾರದ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮಗಳೊಂದಿಗೆ ಮೇ 19ರಿಂದ ಸಾರ್ವಜನಿಕ ಸಾರಿಗೆ ಪುನರಾರಂಭಗೊಂಡಿದೆ. ಆದರೆ, ಕೊರೊನಾ ಸೋಂಕಿನ ಭೀತಿಯಲ್ಲಿರುವ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕ ಸಾರಿಗೆ ಮೂಲಕ ದೂರದೂರಿಗೆ ಪ್ರಯಾಣಿಸಲುಜನ ಹಿಂದೇಟು ಹಾಕುತ್ತಿದ್ದಾರೆ.
ಪ್ರಯಾಣಿಕರ ಕೊರತೆಯಿಂದಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥಯ ಹುಬ್ಬಳ್ಳಿ ವಿಭಾಗಕ್ಕೆ ಮೇ ತಿಂಗಳಲ್ಲಿ ಅಂದಾಜು 17 ಕೋಟಿ ರೂ. ಹಾಗೂ ಜೂನ್ ತಿಂಗಳಲ್ಲಿ 14 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.
ಹುಬ್ಬಳ್ಳಿ ವಿಭಾಗದಲ್ಲಿ ನಾಲ್ಕು ಬಸ್ ಘಟಕಗಳಲ್ಲಿ ಒಟ್ಟು 462 ಬಸ್ ಹಾಗೂ 2,173 ಸಿಬ್ಬಂದಿ ಇದ್ದಾರೆ. ಲಾಕ್ಡೌನ್ ಪೂರ್ವದಲ್ಲಿ 419 ಅನುಸೂಚಿಗಳಲ್ಲಿ ನಿತ್ಯ 1.90 ಲಕ್ಷ ಕಿ.ಮೀ. ಕ್ರಮಿಸುತ್ತಿದ್ದವು. 1.30-1.45 ಲಕ್ಷ ಸಾರ್ವಜನಿಕರು ಹಾಗೂ 45 ಸಾವಿರ ವಿದ್ಯಾರ್ಥಿ ಪ್ರಯಾಣಿಕರು ಸಾರಿಗೆ ಸೇವೆ ಪಡೆಯುತ್ತಿದ್ದರು. ಬೊಕ್ಕಸಕ್ಕೆ ನಿತ್ಯ 50- 55 ಲಕ್ಷ ರೂ. ಆದಾಯ ಸಂಗ್ರಹಣೆ ಆಗುತ್ತಿತ್ತು.
ಜನತಾ ಕರ್ಫ್ಯೂ ಹಾಗೂ ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದ ಮೇ 18ರವರೆಗೆ ಯಾವುದೇ ಬಸ್ಗಳು ರಸ್ತೆಗಿಳಿದಿರಲಿಲ್ಲ. ಸರ್ಕಾರದ ಅನುಮತಿ ಮೇರೆಗೆ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮೇ 19ರಿಂದ ಬಸ್ಗಳ ಸಂಚಾರ ಪುನರಾರಂಭಗೊಂಡಿದೆ. ಆದರೆ ಪ್ರಯಾಣಿಕರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು, ಬಸ್ ಸಂಚಾರ ಸಾರ್ವತ್ರಿಕವಾಗದೆ ಸಾಂಕೇತಿಕ ಕಾರ್ಯಾಚರಣೆಗಷ್ಟೇ ಸೀಮಿತವಾಗಿದೆ. ಇದರಿಂದಾಗಿ ತಿಂಗಳ ಕೊನೆಯವರೆಗೆ ಕೇವಲ 59 ಲಕ್ಷ ರೂ. ಆದಾಯ ಸಂಗ್ರಹವಾಗಿದ್ದು, ವಿಭಾಗಕ್ಕೆ 17 ಕೋಟಿ ರೂ. ಆದಾಯ ನಷ್ಟವಾಗಿದೆ.
ಜೂನ್ ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಬಸ್ಗಳ ಕಾರ್ಯಾಚರಣೆ ಮಾಡಲು ಸಾರಿಗೆ ಸಂಸ್ಥೆ ಸಿದ್ಧವಿದ್ದರೂ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಜನರು ದೂರದ ಪ್ರಯಾಣಕ್ಕೆ ಹಿಂಜರಿದರು. ತೀರಾ ಅಗತ್ಯವಿದ್ದವರು ಮಾತ್ರ ಬಸ್ಗಳಲ್ಲಿ ಪರ ಊರುಗಳಿಗೆ ತೆರಳಿದರು. ತಮ್ಮ ಕೆಲಸ ಕಾರ್ಯಗಳನ್ನು ಕ್ಷಿಪ್ರವಾಗಿ ಮುಗಿಸಿಕೊಂಡು ಬಂದಷ್ಟೇ ವೇಗದಲ್ಲಿ ಮತ್ತೆ ಮನೆ ಸೇರುತ್ತಿದ್ದಾರೆ. ಪ್ರಯಾಣಿಕರ ಕೊರತೆಯಿಂದಾಗಿ ಬಸ್ಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವಾಗಲಿಲ್ಲ. ಪ್ರತಿದಿನವೂ 180 ರಿಂದ 200 ಬಸ್ಗಳನ್ನು ಘಟಕದಿಂದ ಹೊರತೆಗೆದು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಕಾದುಕೊಂಡಿರುವಂತಾಯಿತು.
ಸಂಜೆಯ ವೇಳೆಗೆ ದೂರ ಮಾರ್ಗದ ಕೆಲವು ಬಸ್ಗಳನ್ನು ಹೊರತುಪಡಿಸಿದರೆ ಇನ್ನುಳಿದ ಬಸ್ಗಳನ್ನು ಒಂದೆರಡು ಟ್ರಿಸ್ಗಳ ಭಾಗಶಃ ಸಂಚಾರಕ್ಕಷ್ಟೇ ಸೀಮಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಿತ್ಯ 1.30-1.45 ಲಕ್ಷ ಜನ ಪ್ರಯಾಣಿಸಿದ್ದು, 50- 55 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. ಈಗ ನಿತ್ಯ 22-23 ಸಾವಿರ ಜನರು ಮಾತ್ರ ಪ್ರಯಾಣಿಸುತ್ತಿದ್ದು, 11-13 ಲಕ್ಷ ರೂ. ಮಾತ್ರ ಆದಾಯ ಸಂಗ್ರಹವಾಗಿದೆ. ಆದಾಯ ಸಂಗ್ರಹಣೆಯಲ್ಲಿ ಶೇ 80ರಷ್ಟು ಕುಸಿತ ಕಂಡಿದೆ. ತಿಂಗಳಾಂತ್ಯಕ್ಕೆ 3.55 ಕೋಟಿ ರೂ. ಮಾತ್ರ ಸಂಗ್ರಹವಾಗಿದ್ದು, 14.00 ಕೋಟಿ ರೂ. ಆದಾಯ ನಷ್ಟ ಉಂಟಾಗಿರುತ್ತದೆ ಎಂದು ರಾಮನಗೌಡರ್ ವಿವರಿಸಿದರು.