ನವದೆಹಲಿ: ಅಧ್ಯಕ್ಷ ಎನ್ ಕೆ ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗ 2021 - 22ರಿಂದ 2025 - 26ರ ವರದಿಯ ಕುರಿತು ತನ್ನ ಚರ್ಚೆಯನ್ನು ಶುಕ್ರವಾರ ಮುಕ್ತಾಯಗೊಳಿಸಿತು.
ಚರ್ಚಯೆ ನಡೆ ಅನುಸರಿಸಿ ವರದಿಗೆ ಅಧ್ಯಕ್ಷರು ಮತ್ತು ಇತರ ಸದಸ್ಯರು ಸಹಿ ಹಾಕಿದರು. ಆಯೋಗದ ಅಜಯ್ ನಾರಾಯಣ್ ಝಾ, ಪ್ರೊಫೆಸರ್ ಅನೂಪ್ ಸಿಂಗ್, ಡಾ.ಅಶೋಕ್ ಲಹಿರಿ ಮತ್ತು ಡಾ. ರಮೇಶ್ ಚಂದ್ ಆಯೋಗದ ಸದಸ್ಯರಾಗಿದ್ದಾರೆ.
ಆಯೋಗವು ವರದಿಯನ್ನು ರಾಷ್ಟ್ರಪತಿಗೆ ಸಲ್ಲಿಸಲು ಸಮಯ ಕೋರಿದೆ. ರಾಷ್ಟ್ರಪತಿ ಕಚೇರಿಯು ನವೆಂಬರ್ 9ರಂದು ಮಂಡಿಸಬೇಕೆಂದು ಬಯಸಿದೆ. ಅದರ ನಕಲಿ ಪ್ರತಿ ಮುಂದಿನ ತಿಂಗಳ ಕೊನೆಯಲ್ಲಿ ಪ್ರಧಾನಿಗೆ ಸಲ್ಲಿಸಲಾಗುವುದು.
ಐದು ಹಣಕಾಸು ವರ್ಷಗಳಿಗೆ ಸಂಬಂಧಿಸಿದ ವರದಿಯನ್ನು ಕೇಂದ್ರದ ಕಾರ್ಯಪಡೆ ವರದಿಯೊಂದಿಗೆ ಕೇಂದ್ರ ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು, ಕೊರತೆ, ಸಾಲದ ಮಟ್ಟ, ನಗದು ಮತ್ತು ವಿತ್ತೀಯ ಶಿಸ್ತು ಕ್ರಮಗಳನ್ನು ಆಯೋಗವು ಪರಾಮರ್ಶಿಸಲಿದೆ. ಸಮರ್ಪಕ ವಿತ್ತೀಯ ನಿರ್ವಹಣೆಗೆ ಕೈಗೊಳ್ಳಬೇಕಾದ ಕೊರತೆ ತಗ್ಗಿಸುವ ಕ್ರಮಗಳ ಬಗ್ಗೆಯೂ ಅಗತ್ಯ ಶಿಫಾರಸು ಮಾಡಲಿದೆ.
15ನೇ ಹಣಕಾಸು ಆಯೋಗವನ್ನು ಸಂವಿಧಾನದ 280ನೇ ಪರಿಚ್ಛೇದ (1) ರ ಅನುಸಾರವಾಗಿ ರಾಷ್ಟ್ರಪತಿಗಳು ರಚಿಸಿದ್ದಾರೆ. ಇದನ್ನು ಹಣಕಾಸು ಆಯೋಗ (ವಿವಿಧ ನಿಬಂಧನೆಗಳು) ಕಾಯ್ದೆ 1951 (1951 ರ 33) ರ ನಿಬಂಧನೆಗಳೊಂದಿಗೆ ಒಳಪಟ್ಟಿರುತ್ತದೆ.
ಆರಂಭದಲ್ಲಿ, ಪ್ರಸ್ತುತ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಆಯೋಗದ ಸದಸ್ಯರಾಗಿದ್ದರು. ದಾಸ್ ತನ್ನ ಕಚೇರಿಯನ್ನು ಮುಕ್ತಾಯಗೊಳಿಸಿದ ನಂತರ ಅಜಯ್ ನಾರಾಯಣ್ ಝಾ ಅವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. ಅರವಿಂದ್ ಮೆಹ್ತಾ ಅವರನ್ನು ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಸರ್ಕಾರವು ತನ್ನ ನಾಗರಿಕ ಹಿತಕ್ಕಾಗಿ ಕೆಲಸ ಮಾಡುವಂತೆ ಯೋಜನೆಗಳ ಕಾರ್ಯರೂಪಕ್ಕೆ ತರುವಂತೆ ನೋಡಿಕೊಳ್ಳುತ್ತದೆ. ಅಗತ್ಯವಿರುವವರಿಗೆ ಸೌಲಭ್ಯ ಕಲ್ಪಿಸುವುದು, ತೆರಿಗೆ ಸಂಗ್ರಹದ ಹಣವನ್ನು ನಾಗರಿಕರಿಗೆ ಹೇಗೆ ಖರ್ಚು ಮಾಡಬೇಕು, ಉಂಟಾದ ಜಟಿಲ ಸಮಸ್ಯೆಗಳನ್ನು ನಿಭಾಯಿಸುವ ಸಹವರ್ತಿಯಾಗಿ ಸಲಹೆ ನೀಡುತ್ತದೆ.
ಒಕ್ಕೂಟ ವ್ಯವಸ್ಥೆಯಲ್ಲಿ ಕಂಪನಿ, ಸೀಮಾಸುಂಕ, ಅಬಕಾರಿ, ಆದಾಯ ಮತ್ತಯ ಸೇವಾ ತೆರಿಗೆಗಳಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯೋಚಿತ ಪಾಲು ನೀಡುವುದು; ಕೇಂದ್ರ ಸರ್ಕಾರ ವಿಧಿಸುವ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ನಿಗದಿತ ಅವಧಿಯಲ್ಲಿ ಹಂಚಿಕೆ ಮಾಡುವ ಬಗ್ಗೆ ಸಂವಿಧಾನದ ಆಶಯದಂತೆ ಆಯೋಗ ತನ್ನ ಕಾರ್ಯ ನಿರ್ವಹಿಸುತ್ತದೆ.
ತೆರಿಗೆ ಹಾಗೂ ಇತರೆ ಸಂಪನ್ಮೂಲಗಳನ್ನು ರಾಜ್ಯ- ರಾಜ್ಯಗಳ ಮಧ್ಯೆ ಹಂಚಿಕೆ ಮಾಡುವ ಮುನ್ನ ಆಯೋಗವು ಅವುಗಳ ಅಗತ್ಯತೆ ಹಾಗೂ ವಿತ್ತೀಯ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ರಾಜ್ಯಗಳು ಹೊಂದಿರುವ ಭೂಪ್ರದೇಶ, ಜನಸಂಖ್ಯೆ, ತಲಾ ವರಮಾನ, ಅರಣ್ಯ ಪ್ರದೇಶಮ ನೈಸರ್ಗಿಕ ಸಂಪನ್ಮೂಲ ಇತರೆ ಮಾಹಿತಿ ಆಧರಿಸಿ ಹಂಚಿಕೆ ಮಾಡಲಾಗುತ್ತದೆ. ಉದಾ: ಒಂದು ರಾಜ್ಯದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದ್ದರೆ ತೆರಿಗೆಯ ಪಾಲನ್ನು ಅಧಿಕ ಪ್ರಮಾಣದಲ್ಲಿ ಮೀಸಲಿಡುವಂತೆ ಶಿಫಾರಸು ಮಾಡುತ್ತದೆ.