ಬೆಂಗಳೂರು: ನಿಯಂತ್ರಕ ಕಾರ್ಯವಿಧಾನಗಳ ವೈಫಲ್ಯ, ಮೇಲ್ವಿಚಾರಣೆಯ ಕೊರತೆ, ನ್ಯಾಯಾಲಯದ ಹಸ್ತಕ್ಷೇಪ ಮತ್ತು ನಿರಂತರವಾಗಿ ಮುಚ್ಚುತ್ತಿರುವ ಗಣಿಗಳಿಂದಾಗಿ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಗಣಿಗಾರಿಕೆ ಕ್ಷೇತ್ರದಲ್ಲಿ ನೇರ ಮತ್ತು ಪರೋಕ್ಷವಾಗಿ 12.8 ಲಕ್ಷ ಉದ್ಯೋಗಗಳು ಕಡಿತಗೊಂಡಿವೆ ಎಂದು ಉದ್ಯಮದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಬುಧವಾರ ತಿಳಿಸಿದ್ದಾರೆ.
ಕೃಷಿ ಮತ್ತು ನಿರ್ಮಾಣದ ನಂತರ ಗಣಿಗಾರಿಕೆ ವಲಯವು ಮೂರನೇ ಅತಿದೊಡ್ಡ ಉದ್ಯೋಗ ನೀಡುವ ವಲಯವಾಗಿದೆ. ಗಣಿಗಳ ಸ್ಥಗಿತತೆ, ನಿಯಂತ್ರಕ ಕಾರ್ಯವಿಧಾನದ ವೈಫಲ್ಯ ಮತ್ತು ಮೇಲ್ವಿಚಾರಣೆಯ ಕೊರತೆಯಿಂದಾಗಿ ಕರ್ನಾಟಕ ಮತ್ತು ಗೋವಾದಲ್ಲಿ 2011-12ರಿಂದ ಇಲ್ಲಿಯವರೆಗೆ ನೇರ ಮತ್ತು ಪರೋಕ್ಷವಾಗಿ 12,80,000 ಉದ್ಯೋಗಗಳು ನಷ್ಟವಾಗಿವೆ. ಭೂ ವ್ಯಾಜ್ಯಗಳ ವಿಚಾರಣೆ ಮತ್ತು ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆಯೂ ಕೂಡ ಇದಕ್ಕೆ ಮುಖ್ಯ ಕಾರಣವೆಂದು ಫೆಡರೇಷನ್ ಆಫ್ ಇಂಡಿಯನ್ ಮಿನರಲ್ಸ್ ಇಂಡಸ್ಟ್ರೀಸ್ (ಫಿಮಿ) ಅಧ್ಯಕ್ಷ ಸುನಿಲ್ ದುಗ್ಗಲ್ ತಿಳಿಸಿದ್ದಾರೆ.
ವಲಯ ಸೃಷ್ಟಿಸುವ ಪ್ರತಿಯೊಂದು ಕೆಲಸಕ್ಕೂ 10 ಪರೋಕ್ಷ ಉದ್ಯೋಗಗಳು ಗಣಿಗಾರಿಕೆಯಿಂದ ಹಿಡಿದು ಉತ್ಪನ್ನಗಳ ಅಂತಿಮ ಬಳಕೆದಾರರವರೆಗೂ ಹರಡಿಕೊಂಡಿರುತ್ತದೆ.
2011ರಿಂದ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 166 ಕಬ್ಬಿಣ ಅದಿರು ಗಣಿಗಳು ಮುಚ್ಚಿವೆ. ಇದರಿಂದ 80,000 ನೇರ ಉದ್ಯೋಗಗಳು ಕಡಿತವಾಗಿದೆ. ಪರೋಕ್ಷವಾಗಿ 8 ಲಕ್ಷ ಜನರು ನಿರುದ್ಯೋಗಿಗಳಾಗಿದ್ದಾರೆ. ಅದೇ ರೀತಿಯಾಗಿ ಇದೇ ಅವಧಿಯಲ್ಲಿ ಗೋವಾದಾದ್ಯಂತ ಎಲ್ಲ ಗಣಿಗಾರಿಕೆಯ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ 1 ಲಕ್ಷ ನೇರ ಮತ್ತು 3 ಲಕ್ಷ ಪರೋಕ್ಷ ಉದ್ಯೋಗಗಳು ಕಡಿತವಾಗಿವೆ ಎಂದು ಮಾಹಿತಿ ನೀಡಿದರು.
ಕಲೆದ 7-8 ವರ್ಷಗಳಲ್ಲಿ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ ₹ 10 ಸಾವಿರ ಕೋಟಿ ನಷ್ಟವಾಗಿದ್ದರೇ ಬ್ಯಾಂಕ್ಗಳಿಗೆ ₹ 50 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.