ನವದೆಹಲಿ: ಜಗತ್ತಿನಾದ್ಯಂತ ದಾಳಿ ಸೈಬರ್ ಮಾಡಿದ್ದ ರ್ಯಾನ್ಸಮ್ವೇರ್ ವೈರಸ್‌ಗೆ ಭಾರತದ ಸಂಸ್ಥೆಗಳು ಎಷ್ಟು ಬೆಲೆ ತೆತ್ತಿವೆ ಎಂಬುದು ಇತ್ತೀಚಿನ ವರದಿಯಲ್ಲಿ ಬಹಿರಂಗವಾಗಿದೆ.
ಕುತಂತ್ರಾಂಶ ರ್ಯಾನ್ಸಮ್ವೇರ್ ಸೈಬರ್ ದಾಳಿ ಪರಿಣಾಮ ತಗ್ಗಿಸಲು ಭಾರತೀಯ ಸಂಸ್ಥೆಗಳು ಸರಾಸರಿ 8 ಕೋಟಿ ರೂ. ಸುಲಿಗೆ ಪಾವತಿಸಿವೆ. ಕಳೆದ 12 ತಿಂಗಳುಗಳಲ್ಲಿ 82 ಪ್ರತಿಶತದಷ್ಟು ಭಾರತೀಯ ಸಂಸ್ಥೆಗಳು ರ್ಯಾನ್ಸಮ್ವೇರ್ನ ಹೊಡೆತ ಅನುಭವಿಸಿವೆ. ಇದು 2017ರಿಂದ ಶೇ 15ರಷ್ಟು ಹೆಚ್ಚಾಗಿದೆ ಎಂದು ನೂತನ ವರದಿ ಹೇಳಿದೆ.
ಭಾರತದಲ್ಲಿ ರ್ಯಾನ್ಸನ್ ದಾಳಿಗೆ ಒಳಗಾದ ಪ್ರತಿ ಮೂರು (ಶೇ 66ರಷ್ಟು) ಸಂಸ್ಥೆಗಳಲ್ಲಿ ಎರಡು ಸಂಸ್ಥೆಗಳು ಸುಲಿಗೆ ಪಾವತಿಸಿರುವುದನ್ನು ಒಪ್ಪಿಕೊಂಡಿವೆ.
ಭಾರತದಲ್ಲಿ ಸಂಘಟನಾತ್ಮಕವಾದ ಯಶಸ್ವಿ ಉಲ್ಲಂಘನೆಯ ಪ್ರಮಾಣ ಶೇ 91ರಷ್ಟು ದಾಳಿಯಲ್ಲಿ ಡೇಟಾ ಎನ್‌ಕ್ರಿಪ್ಟ್ ಮಾಡಲಾಗಿದೆ. ವ್ಯವಹಾರದ ಅಲಭ್ಯತೆ, ಆರ್ಡರ್ಗಳ ಕಡಿತ, ಕಾರ್ಯಾಚರಣೆಯ ವೆಚ್ಚ ಮತ್ತು ಇತರ ಅಂಶಗಳು ಒಳಗೊಂಡಂತೆ ಭಾರತದಲ್ಲಿ ಇಂತಹ ದಾಳಿಯ ಪರಿಹಾರದ ಸರಾಸರಿ ವೆಚ್ಚವು 8 ಕೋಟಿ ರೂ.ಯಷ್ಟಿದೆ ಎಂದು ತಿಳಿಸಿದೆ.
ಕಳೆದ 12 ತಿಂಗಳುಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಶೇ 85ರಷ್ಟು ಸಂಸ್ಥೆಗಳು ರ್ಯಾನ್ಸಮ್ವೇರ್ ದಾಳಿಗೆ ತುತ್ತಾಗಿದ್ದು, ದೆಹಲಿಯು ಅಗ್ರಸ್ಥಾನದಲ್ಲಿದೆ. ಬೆಂಗಳೂರು (ಶೇ 83ರಷ್ಟು), ಕೋಲ್ಕತಾ (ಶೇ 81ರಷ್ಟು), ಮುಂಬೈ (ಶೇ 81ರಷ್ಟು), ಚೆನ್ನೈ (ಶೇ 79ರಷ್ಟು) ಮತ್ತು ಹೈದರಾಬಾದ್ (ಶೇ 74) ನಂತರದ ಸ್ಥಾನದಲ್ಲಿವೆ ಎಂಬುದು ಸೈಬರ್ ಸೆಕ್ಯುರಿಟಿ ಸಂಸ್ಥೆ ಸೋಫೋಸ್ ನಡೆಸಿದ 'ಸ್ಟೇಟ್ ಆಫ್ ರ್ಯಾನ್ಸಮ್ವೇರ್ 2020' ಜಾಗತಿಕ ಸಮೀಕ್ಷೆಯಲ್ಲಿ ತಿಳಿದುಬಂದಿದೆ.