ನವದೆಹಲಿ: ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವ ಸುಮಾರು 13 ಲಕ್ಷ ಭಾರತೀಯ ಚಂದಾದಾರರ ಮಾಹಿತಿ ಸೋರಿಕೆಯಾಗಿದ್ದು, ಇವುಗಳ ಡೇಟಾವನ್ನು ಡಾರ್ಕ್ ವೆಬ್ನಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ.
ಸಿಂಗಾಪೂರ ಮೂಲದ ಸೈಬರ್ ಭದ್ರತಾ ಕಂಪನಿಯಾದ ಗ್ರೂಪ್ ಐಬಿ ಸಂಶೋಧಕರು ಜೋಕರ್ ಸ್ಟಾಶ್ ಎಂಬ ಡಾರ್ಕ್ ವೆಬ್ಸೈಟ್ನಲ್ಲಿ ಈ ಆಘಾತಕಾರಿ ಅಂಶ ಇರುವುದು ಪತ್ತೆಹಚ್ಚಿದೆ. ಭಾರತದ ವಿವಿಧ ಬ್ಯಾಂಕ್ಗಳ ಗ್ರಾಹಕರ ತಲಾ 100 ಡಾಲರ್ (ಸುಮಾರು ₹ 7,000) ದರಕ್ಕೆ ಮಾರಲಾಗುತ್ತಿದೆ. ಒಟ್ಟಾರೆ ಮೊತ್ತ ಸುಮಾರು 1.3 ಕೋಟಿ ಡಾಲರ್ (₹ 922 ಕೋಟಿ) ಎನ್ನಲಾಗುತ್ತಿದೆ.
ಈ ದತ್ತಾಂಶಕ್ಕೆ India-Mix-New-01 ಎಂಬ ಹೆಸರಿಡಲಾಗಿದೆ. ದತ್ತಾಂಶಗಳನ್ನು ಟ್ರಾಕ್-1 ಹಾಗೂ ಟ್ರಾಕ್-2 ಎಂಬ ಎರಡು ಸಂಪುಟಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಇದರಲ್ಲಿ ಶೇ 98ರಷ್ಟು ಕಾರ್ಡ್ಗಳು ಭಾರತೀಯರಿಗೆ ಸೇರಿವೆ. ಉಳಿದ ಕಾರ್ಡ್ಗಳು ಕೊಲಂಬಿಯಾ ದೇಶಕ್ಕೆ ಸೇರಿದ್ದವುಗಳು ಆಗಿವೆ ಎಂದು ವರದಿಯಾಗಿದೆ.
ಭಾರತದ ಯಾವೆಲ್ಲ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಮಾಹಿತಿ ಮಾರಾಟಕ್ಕೆ ಬಂದಿದೆ ಎಂಬ ಮಾಹಿತಿಯನ್ನು ಗ್ರೂಪ್ ಐಬಿ ಬಹಿರಂಗಪಡಿಸಿಲ್ಲ. ಆದರೆ, ಮಾರುಕಟ್ಟೆ ಬಂದಿರುವ ಮಾಹಿತಿಯನ್ನು ಎಟಿಎಂ ಮತ್ತು ಪಿಒಎಸ್ ಮಷಿನ್ಗಳಿಂದ ಕಾರ್ಡ್ ಸ್ಕಿಮ್ಮಿಂಗ್ ಉಪಕರಣಗಳ ಮುಖೇನ ಸಂಗ್ರಹಿಸಿರಬಹುದು ಎಂದು ಹೇಳಲಾಗುತ್ತಿದೆ.