ಬೆಂಗಳೂರು: ದೇಶದ ಆಡಳಿತ ಅಯೋಗ್ಯರ ಕೈಲಿದೆ ಎಂದು ಲೇವಡಿ ಮಾಡಿರುವ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ಅದಕ್ಷರ ಮತ್ತು ಅಯೋಗ್ಯರ ಕೈಗೆ ಅಧಿಕಾರ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಉಂಟಾಗಿರುವ ಆರೋಗ್ಯ ತುರ್ತು ಪರಿಸ್ಥಿತಿಯೇ ಅತ್ಯುತ್ತಮ ಉದಾಹರಣೆ.
ಇನ್ನು ಜನರಿಗೆ ಯಾವ ಅರ್ಥದಲ್ಲೂ ಸಹಾಯ ಮಾಡದ ಈ ಬಿಜೆಪಿಗರ ಕೈಲಿ ಇರುವ ಅಧಿಕಾರಕ್ಕೂ ನಾಯಿ ಮೊಲೆಯಲ್ಲಿರುವ ಹಾಲಿಗೂ ಅಂತಹ ವ್ಯತ್ಯಾಸ ಏನಿಲ್ಲ. ಇದು ಸೋಂಕಿತ ಸರ್ಕಾರ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಬಂತೆಂದರೆ ಸಾಕು, ಎಲ್ಲಿದ್ದರೂ ಸಹ ಧರ್ಮದ ಆಧಾರದಲ್ಲಿ ಶವ ರಾಜಕೀಯ ಮಾಡಲು ಓಡಿ ಬರುವ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದ ಪ್ರತಾಪ್ ಸಿಂಹ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಇನ್ನಿತರ ಬಿಜೆಪಿಗರಿಗೆ ಶವ ರಾಜಕೀಯಕ್ಕಿಂತ ಜನರಿಗೆ ಬೇಕಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ರಾಜಕೀಯವೇ ಪ್ರಧಾನ ಎಂದು ಇನ್ನಾದರೂ ಅರ್ಥವಾದೀತೇ?.
ಸಾರ್ವಜನಿಕರಿಗೆ ಆಸ್ಪತ್ರೆ ಮತ್ತು ವೈದ್ಯಕೀಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕಾದ ರಾಜ್ಯ ಬಿಜೆಪಿ ಸರ್ಕಾರವು, ಸ್ಮಶಾನಗಳ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರುವುದನ್ನು ನೋಡಿದಾಗಲೇ ನಮಗೆ ಇದು ಎಂತಹ ಅಯೋಗ್ಯರ ಮತ್ತು ಕೈಲಾಗದ ಸರ್ಕಾರ ಎಂದು ಅರ್ಥ ಮಾಡಿಕೊಳ್ಳಬಹುದು ಎಂದಿದ್ದಾರೆ.
ಪ್ರಚಾರದ ಸರಕಲ್ಲ:
ಲಾಕ್ ಡೌನ್ ಎಂದರೆ ಅದು ಸೋಂಕು ಹರಡದಂತೆ ಮಾಡುವ ನಿಯಂತ್ರಣವೇ ಹೊರತು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಬಿಜೆಪಿ ಪಕ್ಷದ ಪ್ರಚಾರದ ಸರಕಲ್ಲ. ಇನ್ನು ಕೊರೊನಾ ತಡೆ ಕ್ರಮಗಳನ್ನು ಕೇಂದ್ರ ಸರ್ಕಾರ ಸೂಚಿಸಿದಾಗ ಮಾತ್ರವೇ ಪಾಲಿಸುವುದಾದರೆ ನಮ್ಮ ರಾಜ್ಯ ಸರ್ಕಾರ ಸತ್ತು ಹೋಗಿದೆಯೇನು?.
ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ನಡೆಯಿರಿ. ಆಕ್ಸಿಜನ್ ಸಿಲಿಂಡರ್ ಗಳಿಲ್ಲದೇ ಜನರು ಒದ್ದಾಡುವಾಗ ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರು ಜಾಹೀರಾತುಗಳಿಗೆ ಬೇಕಾಬಿಟ್ಟಿ ಹಣ ಖರ್ಚು ಮಾಡುವುದು ನಿಜಕ್ಕೂ ವಿವೇಕದ ನಡೆಯಲ್ಲ. ಸಾವಿನ ವೇಳೆ ಪ್ರಚಾರ ನಡೆಸುವುದು ಧರ್ಮ ಎನಿಸಿಕೊಳ್ಳುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.