ಕುಶಾಲನಗರ: ದುಬಾರೆ ಸಾಕಾನೆ ಶಿಬಿರದ ‘ಕುಶ’ ಈಗ ಬಂಧಮುಕ್ತನಾಗಿ ಅರಣ್ಯಕ್ಕೆ ರಾಜನಾಗಲು ಹೊರಟಿದ್ದಾನೆ.
ಇಂದು ಸಂಜೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ವನ್ಯಜೀವಿ ವಲಯದ ಅರಣ್ಯ ಪ್ರದೇಶಕ್ಕೆ ಕಳುಹಿಸಿ ಅಲ್ಲಿ ಕುಶನಿಗೆ ರೇಡಿಯೊ ಕಾಲರ್ ಅಳವಡಿಸಿ ಬಂಧಮುಕ್ತಗೊಳಿಸಲಾಗಿದೆ.
ಇನ್ನು ಶಿಬಿರದಲ್ಲಿ ಬಂಧಿಸಲಾಗಿದ್ದ ಆನೆಯನ್ನು ಬಂಧಮುಕ್ತಗೊಳಿಸುವಂತೆ ಸರ್ಕಾರ ಆದೇಶಿಸಿತ್ತು. ಅದರಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕುಶನಿಗೆ ರೇಡಿಯೊ ಕಾಲರ್ ಅಳವಡಿಸಿ ಬಂಡಿಪುರದ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಮಾಹಿತಿ ನೀಡಿದ್ದಾರೆ.
ವರ್ಷದ ಹಿಂದೆ ಪರಾರಿಯಾಗಿತ್ತು:
ಕಳೆದ ಒಂದು ವರ್ಷದ ಹಿಂದೆ ದುಬಾರೆ ಶಿಬಿರದಿಂದ ಮದವೇರಿದ ಇದು ಕಾಡಿಗೆ ಓಡಿ ಹೋಗಿತ್ತು. ಮೂರು ವಾರ ಕಳೆದರೂ ಆನೆ ಶಿಬಿರಕ್ಕೆ ಮರಳಿರಲಿಲ್ಲ. ಕುಶನನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸತತ ಪ್ರಯತ್ನ ನಡೆಸಿದ್ದರೂ ಸಾಧ್ಯವಾಗುತ್ತಿರಲಿಲ್ಲ. ಒಂದು ವರ್ಷದ ಬಳಿಕ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಸಂಗಾತಿಯಿಂದ ಬೇರ್ಪಡಿಸಿ, ಸೆರೆ ಹಿಡಿಯಲಾಗಿತ್ತು.
ಈ ಎಲ್ಲಾ ಕಾರಣಕ್ಕೆ ಕಾಲಿಗೆ ಸರಪಳಿ ಹಾಕಿ ಕ್ರಾಲ್ ನಲ್ಲಿ ಬಂಧಿಸಲಾಗಿತ್ತು. ನುರಿತ ಮಾವುತರಿಂದ ಮತ್ತೆ ಪಳಗಿಸಲು ಅರಣ್ಯ ಇಲಾಖೆಯವರು ಕ್ರಮ ಕೈಗೊಂಡಿದ್ದರು. ಆದರೆ ಸಂಗಾತಿ ಹಾಗೂ ಕಾಡಾನೆಗಳೊಂದಿಗೆ ಓಡಾಡಿಕೊಂಡಿದ್ದ ಆನೆಯನ್ನು ಬಲವಂತವಾಗಿ ಸೆರೆಹಿಡಿದು ಕ್ರಾಲ್‌ನಲ್ಲಿ ಬಂಧಿಸಿ ಹಿಂಸಿಸಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇವರೆಲ್ಲರ ಧ್ವನಿಯನ್ನು ಆಲಿಸಿದ ಸರ್ಕಾರ ಈಗ ಕುಶನನ್ನು ಬಂಧಮುಕ್ತ ಮಾಡಿದೆ.