ಹೈದರಾಬಾದ್: ಗಾಜಿಯಾಬಾದ್ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಯೋಗಿ, “ಪೊಲೀಸರು ಸತ್ಯ ಏನೆಂದು ಹೇಳಿದ ಬಳಿಕವೂ ನೀವು ಸಮಾಜದಲ್ಲಿ ವಿಷ ಹರಡುವ ಕಾರ್ಯದಲ್ಲಿ ನಿರತರಾಗಿದ್ದೀರಿ. ನಿಮಗೆ ನಾಚಿಕೆಯಾಗಬೇಕು” ಎಂದು ಗುಡುಗಿದ್ದಾರೆ.
ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ ಯುವಕರ ತಂಡ ಬಲವಂತವಾಗಿ ಶ್ರೀ ರಾಮ್ ಎಂದು ಹೇಳಲು ಆಗ್ರಹಿಸಿದ್ದ ಪ್ರಕರಣ ಇತ್ತೀಚಿಗೆ ಬೆಳಕಿಗೆ ಬಂದಿತ್ತು. ಈ ಸಂಬಂಧ ರಾಹುಲ್, ಸಿಎಂ ಯೋಗಿ ಆದಿತ್ಯನಾಥ ಅವರನ್ನು ಗುರಿಯಾಗಿಸಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದರು.
ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದು, “ಶ್ರೀ ರಾಮನ ನಿಜವಾದ ಭಕ್ತರು ಇದನ್ನು ಮಾಡಬಹುದು ಎಂದು ನಂಬಲು ನಾನು ಸಿದ್ಧರಿಲ್ಲ. ಇಂತಹ ಕ್ರೌರ್ಯ ಮಾನವೀಯತೆಯಿಂದ ದೂರವಿದೆ. ಸಮಾಜ ಮತ್ತು ಧರ್ಮ ಎರಡಕ್ಕೂ ನಾಚಿಕೆಗೇಡಿನ ಸಂಗತಿ” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಟ್ವೀಟ್ ಮಾಡಿದ್ದಾರೆ. “ ಶ್ರೀ ರಾಮ್\ ಅವರ ಮೊದಲ ಪಾಠ ಎಂದರೆ ನೀವು ಜೀವನದಲ್ಲಿ ಸತ್ಯವನ್ನು ಮಾತನಾಡಿ ಎಂಬುದಾಗಿದೆ. ಪೊಲೀಸರು ಸತ್ಯವನ್ನು ಹೇಳಿದ ನಂತರವೂ ನೀವು ಸಮಾಜದಲ್ಲಿ ವಿಷ ಹರಡುವ ಕಾರ್ಯದಲ್ಲಿ ನಿರತರಾಗಿದ್ದೀರಿ. ಅಧಿಕಾರದ ದುರಾಸೆಯಲ್ಲಿ ಮಾನವೀಯತೆ ಮರೆತ ನಿಮಗೆ ನಾಚಿಕೆಯಾಗಬೇಕು. ಉತ್ತರ ಪ್ರದೇಶದ ಜನರನ್ನು ಅವಮಾನಿಸುವುದು, ಅವರನ್ನು ದೂಷಿಸುವುದನ್ನು ನಿಲ್ಲಿಸಿ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಟ್ವೀಟ್ ಮಾಡಿದ್ದಾರೆ. 'ನಂಬಿಕೆ ಮತ್ತು ಭಕ್ತಿಯಿಂದಾಗಿ ಕೋಟ್ಯಂತರ ಜನರು ದೇವರ ಪಾದಕ್ಕೆ ಅರ್ಪಣೆಗಳನ್ನು ಮಾಡಿದ್ದಾರೆ. ಆ ದಾನವನ್ನು ದುರುಪಯೋಗಪಡಿಸಿಕೊಳ್ಳುವುದು ಅಧರ್ಮ, ಪಾಪ, ಅವರ ನಂಬಿಕೆಗೆ ಮಾಡಿದ ಅವಮಾನ" ಎಂದಿದ್ದಾರೆ.
ಘಟನೆ ಹಿನ್ನೆಲೆ:
ಗಾಜಿಯಾಬಾದ್ ಜಿಲ್ಲೆಯ ವೃದ್ಧ ಮುಸ್ಲಿಂ ವ್ಯಕ್ತಿ ಸೂಫಿ ಅಬ್ದುಲ್ ಸಮದ್ ಎಂಬವರನ್ನು ಯುವಕರ ತಂಡ ಥಳಿಸಿ ಜೈ ಶ್ರೀ ರಾಮ್ ಎಂದು ಜಪಿಸುವಂತೆ ಹೇಳಿದ್ದಾರೆ ಅಂತ ಆರೋಪಿಸಲಾಗಿದೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಹಿಂದೂ ಮತ್ತು ಮುಸ್ಲಿಮರು ಸೇರಿದಂತೆ ಸುಮಾರು ಆರು ಜನರನ್ನು ಬಂಧಿಸಿದ್ದಾರೆ. ಜೂನ್ 5 ರಂದು ಘಟನೆ ನಡೆದಿದ್ದು ಎರಡು ದಿನಗಳ ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 342, 323, 504 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಗಾಜಿಯಾಬಾದ್‌ನ ಲೋನಿ ಪ್ರದೇಶದ ನಾಲ್ವರು ಪುರುಷರು ಸೂಫಿಯನ್ನು ಥಳಿಸುತ್ತಿರುವುದು, ಗಡ್ಡ ಕತ್ತರಿಸಿ ಜೈ ಶ್ರೀ ರಾಮ್ ಎಂದು ಜಪಿಸುವಂತೆ ಕೇಳಿಕೊಳ್ಳುವುದು ಕಂಡುಬರುತ್ತದೆ.