ಹೈದರಾಬಾದ್: ನೀನಿಲ್ಲದ ಜೀವನ ನನಗೆ ಬೇಸರವಾಗುತ್ತಿದೆ. ನೀ ಇಲ್ಲದ ಲೋಕದಲ್ಲಿ ನಾನಿರಲ್ಲ, ಓ ಗೆಳತಿ ನಿನ್ನ ಬಳಿ ನಾನೂ ಬರ್ತಿದ್ದೇನೆ ಎಂದು ಮರಣಪತ್ರ ಬರೆದಿಟ್ಟು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಯೆಮನ್ ದೇಶದ ಮೊಹಮದ್ ಓಥ್ಮನ್ ಅಲಿ (24) ತನ್ನ ಸಂಬಂಧಿ ಫೈಜಲ್ ಮಬ್ಕೊತ್ ಹಸನ್ ಜೊತೆ ಸೇರಿ ಹೈದರಾಬಾದ್ನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದರು. ಅಲಿಗೆ 9 ತಿಂಗಳ ಹಿಂದೆ ಯೆಮನ್ ದೇಶದ ಯುವತಿ ಜೊತೆ ನಿಶ್ಚಿತಾರ್ಥವಾಗಿತ್ತು. ಇಬ್ಬರು ಫೋನ್ನಲ್ಲಿ ಮಾತನಾಡುತ್ತಲೇ ಮಾನಸಿಕವಾಗಿ ಹತ್ತಿರವಾಗಿದ್ದರು. ಆದ್ರೆ, ವಿಧಿಯಾಟಕ್ಕೆ ಯುವತಿ ಬಲಿಯಾಗಿದ್ದಳು. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಆಕೆ 3 ತಿಂಗಳ ಹಿಂದೆ ಸಾವನ್ನಪ್ಪಿದ್ದಳು.
ಭಾವಿ ಪತ್ನಿ ಸಾವಿನ ಸುದ್ದಿ ತಿಳಿದ ಅಲಿ ಮಾನಸಿಕ ಖಿನ್ನತೆಗೆ ಒಳಗಾದರು. ಇದೇ ಸಮಯದಲ್ಲಿ ಅಲಿಯ ವಿಸಾ ಸಮಯ ಮುಗಿದು ಹೋಗಿದೆ ಎಂದು ಎಫ್ಆರ್ಆರ್ಒನಿಂದ ಸಮಾಚಾರ ಬಂದಿತ್ತು. ಅಲಿಗೆ ಭಾರತವನ್ನು ಬಿಟ್ಟು ಹೋಗುವ ಪರಿಸ್ಥಿತಿ ಎದುರಾಯಿತು. ಇದರಿಂದ ಅಲಿ ಮತ್ತಷ್ಟು ಮಾನಸಿಕವಾಗಿ ಬಳಲಿದ್ದಾರೆ. ಕೊನೆಗೆ ಡೆತ್ನೋಟ್ ಬರೆದಿಟ್ಟ ಅಲಿ ನೇಣಿಗೆ ಶರಣಾಗಿದ್ದಾರೆ.
ಹಸನ್ ಮನೆಗೆ ಬಂದು ನೋಡಿದಾಗ ಅಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಹಸನ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಅಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಡೆತ್ನೋಟ್ನ್ನು ವಶಕ್ಕೆ ಪಡೆದರು. ಅಲಿ ಡೆತ್ನೋಟ್ನಲ್ಲಿ, ಯುವತಿ ಜೊತೆ ನಿಶ್ಚಿತಾರ್ಥವಾಗಿದ್ದು ಆಕೆಯ ಸಾವು ಮತ್ತು ಒಂಟಿತನದ ಬಗ್ಗೆ ಉಲ್ಲೇಖಿಸಿದ್ದಾರೆ.
ಪೊಲೀಸರು ಅನುಮಾನಸ್ಪದ ಸಾವು(UDR) ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.