ದೊಡ್ಡಬಳ್ಳಾಪುರ: ಸತಿ-ಪತಿ ಅನ್ನೋದು ಅದೊಂದು ಬಿಡಿಸಲಾಗದ ನಂಟು. ಅದಕ್ಕೂ ಮಿಗಿಲಾಗಿ ಪರಸ್ಪರ ಜೀವನ ನಡೆಸಲು ಸಾಧ್ಯವಾಗದು ಎಂದಾದಲ್ಲಿ ಇಬ್ಬರೂ ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯಬಹುದು. ಆದರೆ ಇಲ್ಲೋರ್ವ ಮಹಿಳೆ ರಂಗಿನಾಟ ಆಡಿ ತನ್ನ ಗಂಡನನ್ನು ಪರಲೋಕಕ್ಕೆ ಕಳುಹಿಸಿರುವ ಗಂಭೀರ ಆರೋಪ ಎದುರಿಸುತ್ತಿದ್ದಾಳೆ.
ಗಂಡ ಫಿಟ್ಸ್ ಬಂದು ಸಾವಿಗೀಡಾಗಿದ್ದಾನೆ ಎಂದು ಕಥೆ ಕಟ್ಟಿದ ಆಕೆ ಗಂಡನ ಅಂತಿಮ ಕಾರ್ಯ ಮುಗಿಸಿ ತಾನು ಬಚಾವ್ ಆದನೆಂದು ಸುಮ್ಮನಾಗಿದ್ದಳು. ಆದರೆ, ಆಕೆಯ ಮಗನೇ ಅಪ್ಪನ ಕೊಲೆಯ ರಹಸ್ಯ ಬಿಚ್ಚಿಟ್ಟಿದ್ದಾನೆ.
ಘಟನೆಯ ವಿವರ:
ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ ನಿವಾಸಿ ರಾಘವೇಂದ್ರ (41) ಸಾವಿಗೀಡಾದ ವ್ಯಕ್ತಿ. ಡಿಸೆಂಬರ್ 26 ರ ರಾತ್ರಿ 1 ಗಂಟೆಯ ಸಮಯದಲ್ಲಿ ರಾಘವೇಂದ್ರನ ಸಹೋದರ ಚಂದ್ರಶೇಖರ್ ಅವರಿಗೆ ಶೈಲಜಾ ಕರೆ ಮಾಡಿ, ತನ್ನ ಗಂಡ ಸಾವಿಗೀಡಾದ ಬಗ್ಗೆ ಮಾಹಿತಿ ತಿಳಿಸಿದ್ದಳು. ಮನೆ ಸಮೀಪದಲ್ಲೇ ವಾಸವಾಗಿದ್ದ ಅವರು ಬಂದು ನೋಡಿ, ಈ ಸಾವು ಹೇಗಾಯಿತು? ಎಂದು ಕೇಳಿದ್ದಾರೆ. ಅದಕ್ಕೆ ಮೂರ್ಚೆರೋಗ ಬಂದು ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಶೈಲಜಾ ನಂಬಿಸಿದ್ದಾಳೆ.
ಈ ಮೊದಲೇ ರಾಘವೇಂದ್ರನಿಗೆ ಮೂರ್ಚೆರೋಗ ಬರುತ್ತಿದ್ದ ಕಾರಣಕ್ಕೆ ನಿಜವಿರಬಹುದೇನೋ ಎಂದುಕೊಂಡು ಎಲ್ಲರೂ ಸುಮ್ಮನಿದ್ದರು. ಬೆಳಗ್ಗೆ ಅಂತಿಮ ಕಾರ್ಯ ಮುಗಿಸಿ ಸುಮ್ಮನಾಗಿದ್ದಾರೆ. ಮೂರನೇ ದಿನ ಹಾಲು - ತುಪ್ಪ ಕಾರ್ಯದಲ್ಲಿ ಮೃತ ರಾಘವೇಂದ್ರನ ಮಗ ಪವನ್ ಡಿಸೆಂಬರ್ 26 ರಾತ್ರಿ ನಡೆದ ಅಪ್ಪನ ಕೊಲೆ ರಹಸ್ಯವನ್ನ ತನ್ನ ಚಿಕ್ಕಪ್ಪ- ದೊಡ್ಡಪ್ಪನವರ ಮುಂದೆ ಬಾಯ್ಬಿಟ್ಟಿದ್ದಾನೆ. ಇನ್ನು ಆ ಕೊಲೆಗೆ ಸಾಕ್ಷಿ ಎನ್ನುವಂತೆ ಮನೆಯ ತುಂಬ ರಕ್ತದ ಕಲೆಗಳು ಮತ್ತು ಆತ ಧರಿಸಿದ ಬಟ್ಟೆಗಳಲ್ಲಿ ರಕ್ತ ಇರುವುದು ಕೊಲೆಯ ಸಂಶಯವನ್ನು ಮತ್ತಷ್ಟು ಧೃಢಪಡಿಸಿದೆ.
ಅಂದು ನಡೆದ ಆ ಘಟನೆ ಏನು?
ಅಂದು ರಾತ್ರಿ ರಾಘವೇಂದ್ರ ತನ್ನ ಕುಟುಂಬ ಸಮೇತ ಚರ್ಚ್‌ಗೆ ಹೋಗಿ ರಾತ್ರಿ 9 ಗಂಟೆಗೆ ಮನೆಗೆ ಬಂದಿದ್ದ. ನಂತರ ಸುಮಾರು 11 ಗಂಟೆಯ ಸಮಯದಲ್ಲಿ ಮನೆಗೆ ಬಂದ ಅನಾಮಿಕ ವ್ಯಕ್ತಿಯೊಬ್ಬ ರಾಘವೇಂದ್ರನ ತಲೆಗೆ ಲಟ್ಟಣಿಗೆಯಿಂದ ಹೊಡೆದಿದ್ದಾನಂತೆ. ಆ ವೇಳೆ ಶೈಲಜಾ ಆತನ ಎದೆಯ ಮೇಲೆ ಕುಳಿತು ಆತ ಅಲುಗಾಡದಂತೆ ಮಾಡಿದ್ದಳಂತೆ. ಅಷ್ಟೇ ಅಲ್ಲ, ಶೈಲಜಾಳ ತಾಯಿ ರಾಘವೇಂದ್ರನ ಕಾಲು ಹಿಡಿದುಕೊಂಡಿದ್ದಳಂತೆ, ಜೊತೆಗೆ ಈ ಬಾಲಕ ಎಲ್ಲಿ ಕೂಗಿ ಬಿಡುತ್ತಾನೋ ಎಂಬ ಭಯಕ್ಕೆ ಆತನ ಬಾಯಿ ಕೂಡ ಮುಚ್ಚಿದ್ದಳಂತೆ. ಈ ಎಲ್ಲಾ ಮಾಹಿತಿಯನ್ನು ಕಣ್ಣಾರೆ ಕಂಡ ರಾಘವೇಂದ್ರನ ಮಗ ವಿವರಿಸಿದ್ದಾನೆ.
ಈ ಕೃತ್ಯ ಯಾತಕ್ಕಾಗಿ?
ನೇಕಾರಿಕೆ ಕೆಲಸ ಮಾಡುತ್ತಿದ್ದ ರಾಘವೇಂದ್ರ 12 ವರ್ಷಗಳ ಹಿಂದೆ ಆಂಧ್ರಪ್ರದೇಶದ ಗೊರಂಟ್ಲಾದ ಶೈಲಜಾರನ್ನು ಮದುವೆಯಾಗಿದ್ದ. ಕರೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರ ದಾಂಪತ್ಯಕ್ಕೆ ಮುದ್ದಾದ ಒಂದು ಗಂಡು ಮತ್ತು ಹೆಣ್ಣು ಮಗುವಿತ್ತು. ಹೆಂಡತಿ ಶೈಲಜಾ ದೊಡ್ಡಬಳ್ಳಾಪುರ ಅಪೆರಲ್ಸ್ ಪಾರ್ಕ್ ನ ಇಂಡಿಗೋ ಬ್ಲೂ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುತ್ತಿದ್ದಳು. ಇದೇ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಬರುತ್ತಿದ್ದ ವ್ಯಕ್ತಿಯೊಂದಿಗೆ ಈಕೆ ಸಲುಗೆಯಿಂದ ಇರುತ್ತಿದ್ದಳಂತೆ. ಈ ಸಲುಗೆಯೇ ಈ ಎಲ್ಲಾ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ರಾಘವೇಂದ್ರ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತ ಬಂದು ಹೋಗುತ್ತಿದ್ದನಂತೆ. ಇನ್ನು ರಾಘವೇಂದ್ರ ಕೊಲೆಯಾದ ದಿನ ಆತ ಬಂದಿರುವ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಲೆಮರೆಸಿಕೊಂಡ ಕ್ರೂರಿ:
3 ದಿನಗಳ ಕಾರ್ಯ ನಂತರ ಊರಿಗೆ ಹೋದ ಶೈಲಜಾ 11 ದಿನದ ಕಾರ್ಯಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದವರು ಫೋನ್ ಕೂಡ ಮಾಡಿದ್ದಾರೆ. ಆದರೆ, ಸಂಪರ್ಕ ಸಿಕ್ಕಿಲ್ಲ. ಆಕೆ ತನ್ನ ಚಿಕ್ಕ ಮಗಳೂಂದಿಗೆ ತಲೆ ಮರೆಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಾಗಿದೆ. ಕೊಲೆಯ ಬಗ್ಗೆ ಸಾಕ್ಷ್ಯ ಇದ್ದರೂ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ, ಆರೋಪಿಗಳಿಗೆ ತಕ್ಕ ಶಾಸ್ತಿ ಆಗಬೇಕೆಂಬುದು ಸಾರ್ವಜನಿಕರು ಹಾಗೂ ರಾಘವೇಂದ್ರ ಕುಟುಂಬಸ್ಥರ ಆಗ್ರಹ.