ತುಮಕೂರು: ಜಿಲ್ಲೆಯ ಚಿಕ್ಕನಾಯಕಯನಹಳ್ಳಿ ತಾಲೂಕಿನ ಹೊಸಕೆರೆ ಗ್ರಾಮದ ವ್ಯಕ್ತಿಯೊಬ್ಬರು ಕೊರೊನಾ ಸೋಂಕು ತಗುಲಿ ಉಸಿರಾಟದ ತೊಂದರೆಯಿಂದ ತಾಲೂಕು ಆಸ್ಪತ್ರೆಯಲ್ಲಿ ಪೂರಕ ಚಿಕಿತ್ಸೆ ದೊರೆಯದೆ ಬಳಲುತ್ತಿದ್ದಾರೆ. ಈ ಕುರಿತಂತೆ ಕುಟುಂಬದ ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡರು. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಚಿನ್ನಾಭರಣಗಳನ್ನು ಅಡವಿಟ್ಟು ಸ್ಕ್ಯಾನಿಂಗ್ ಮಾಡಿಸಲಾಗಿದೆ. ಅದರಲ್ಲಿ ಶ್ವಾಸಕೋಶದ ತೊಂದರೆಯಿಂದ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋ ಜಿಲ್ಲಾಡಳಿತದ ಗಮನಕ್ಕೆ ತರಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ಆರು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಕೂಲಿ ಕೆಲಸಕ್ಕಾಗಿ ಹೋಗಿದ್ದ ವೇಳೆ ಸೋಂಕು ತಗುಲಿದೆ. ವಾಪಸ್ ತಮ್ಮ ಊರಿಗೆ ಬಂದ ಸಂದರ್ಭದಲ್ಲಿ ಉಸಿರಾಟದ ತೊಂದರೆ ಎದುರಾಗಿದೆ ಎಂದು ಮಹಿಳೆ ವಿಡಿಯೋದಲ್ಲಿ ವಿವರಿಸಿದ್ದಾರೆ.