ಮೈಸೂರು: ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ರದ್ದು ಮಾಡಿ ಮಕ್ಕಳು ಹಾಗೂ ಶಿಕ್ಷಕರ ಪ್ರಾಣ ಉಳಿಸಬೇಕು ಎಂದು ಆಗ್ರಹಿಸಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಜಯಚಾಮರಾಜ್ ಒಡೆಯರ್ ವೃತ್ತದ ಮುಂಭಾಗ ಏಕಾಂಗಿಯಾಗಿ ಪ್ರತಿಭಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ನಡೆಸದೆ ಪಾಸ್ ಮಾಡಿ. ಹದಿನೈದು ಲಕ್ಷ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಬೇಡಿ. ಪರೀಕ್ಷೆ ಮಾಡಬೇಡಿ ಎಂದು ಆಗ್ರಹಿಸಿದರು.
ನಾಳೆ ಸುರೇಶ್ ಕುಮಾರ್ ನಿವಾಸದ ಮುಂದೆ ಪ್ರತಿಭಟನೆ ಮಾಡ್ತೀನಿ. ಹದಿನೈದು ಲಕ್ಷ ವಿದ್ಯಾರ್ಥಿಗಳ ಜೊತೆ ಸಿಬ್ಬಂದಿ, ಶಿಕ್ಷಕರು ಕುಟುಂಬ ಸೇರಿ 25 ಲಕ್ಷ ಮಂದಿ ಆಗ್ತಾರೆ. ಸೋಂಕು ಹರಡಿದ್ರೆ ಯಾರು ಹೊಣೆ. ವಿದ್ಯಾರ್ಥಿಗಳು ಪರೀಕ್ಷೆ ಬೇಡ ಎನ್ನುತ್ತಿದ್ದಾರೆ. ಛತ್ತೀಸ್‌ಗಢ ಮಾದರಿಯಲ್ಲಿ ಮನೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿ. ಕೆಲ ರಾಜ್ಯಗಳಲ್ಲಿ ಪರೀಕ್ಷೆ ಮುಂದೂಡಿದ್ದಾರೆ. ರದ್ದು ಸಹ ಮಾಡಿದ್ದಾರೆ ಎಂದರು.
ಈಗಾಗಲೇ ಇವರ ಬೇಜವಾಬ್ದಾರಿಯಿಂದ ಚಾಮರಾಜನಗರದಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಡಬೇಕಿತ್ತು. ಇದುವರೆಗೂ ಒಬ್ಬರನ್ನ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.