ಮಂಗಳೂರು : ಬೆಡ್ ಬ್ಲಾಕಿಂಗ್ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ನಡೆಸಿರುವ ಸುದ್ದಿಗೋಷ್ಠಿಯಲ್ಲಿ ಕೇವಲ 17 ಮಂದಿ ಅಲ್ಪಸಂಖ್ಯಾತರ ಹೆಸರನ್ನು ಮಾತ್ರ ಉಲ್ಲೇಖಿಸಿರುವ ಹಿಂದೆ ದುರುದ್ದೇಶ ಅಡಗಿದೆ ಎಂದು ಶಾಸಕ ಯು. ಟಿ. ಖಾದರ್ ಆರೋಪಿಸಿದರು.
ಮಂಗಳೂರಿನಲ್ಲಿಂದು ಮಾತನಾಡಿರುವ ಅವರು, ಈ ಬಗ್ಗೆ ಪ್ರಾಮಾಣಿಕವಾದ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು. ಬೆಂಗಳೂರಿನಲ್ಲಿ ವಿವಿಧ ಝೋನ್ಗಳಿವೆ. ಈ ಆರೋಪ ಬಂದಿರೋದು ಸೌತ್ ಝೋನ್ ವಿಭಾಗದಲ್ಲಿ. ಪ್ರತಿ ಝೋನ್‌ಗೂ ವಾರ್ ರೂಂ ಸ್ಥಾಪನೆ ಮಾಡಲಾಗಿದೆ.
ಈ ವಾರ್ ರೂಂಗೆ ಮುಖ್ಯಸ್ಥೆಯಾಗಿರೋದು ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಹಾಗೂ ಇನ್ನೋರ್ವ ಅಧಿಕಾರಿ ವೀರಭದ್ರಯ್ಯ. ಆದರೆ, ಇವರಿಬ್ಬರನ್ನು ಕೈಬಿಟ್ಟು ವಾರ್ ರೂಂಗೆ ಸಂಬಂಧಪಡದ ಘನತ್ಯಾಜ್ಯ ಉಸ್ತುವಾರಿ ಸರ್ಫ್ರಾಝ್ ಖಾನ್ ಹೆಸರು ತರುವುದಕ್ಕೆ ಏನು ಕಾರಣ. ಹಾಗಾದರೆ, ತೇಜಸ್ವಿ ಸೂರ್ಯ ಅವರಿಗೆ ಅಲ್ಲಿನ ಉಸ್ತುವಾರಿ ಯಾರೆಂಬುದರ ಬಗ್ಗೆ ಅಷ್ಟೂ ಮಾಹಿತಿ ಇಲ್ವೇ ಎಂದು ಪ್ರಶ್ನಿಸಿದರು.
ತುಳಸಿ ಮದ್ದಿನೇನಿ ಹಾಗೂ ವೀರಭದ್ರಯ್ಯನವರು ನೇರ ಸಂದರ್ಶನ ನಡೆಸುವ ಮೂಲಕ ಈ ವಾರ್ ರೂಂಗೆ 214 ಮಂದಿಯನ್ನು ಕಾಲ್ ಸೆಂಟರ್ ಮೂಲಕ ನೇಮಕ ಮಾಡುತ್ತಾರೆ.
ಈ 214 ಮಂದಿಯಲ್ಲಿ 17 ಮಂದಿ ಮಾತ್ರ ಅಲ್ಪಸಂಖ್ಯಾತರು. ಆದರೆ, ತೇಜಸ್ವಿ ಸೂರ್ಯ ಅವರು ಸುದ್ದಿಗೋಷ್ಠಿಯಲ್ಲಿ ಈ 17 ಮಂದಿಯ ಹೆಸರು ಮಾತ್ರ ಉಲ್ಲೇಖ ಮಾಡಿದ್ದಾರೆ.
ಆದ್ದರಿಂದ ಕೇವಲ ಅವರ ಹೆಸರು ಮಾತ್ರ ಉಲ್ಲೇಖ ಮಾಡಿರುವ ಹಿಂದಿನ ಉದ್ದೇಶ ನೈಜವೋ ಅಥವಾ ದುರುದ್ದೇಶಪೂರಿತವಾಗಿದ್ದೋ ಎಂದು ರಾಜ್ಯದ ಜನತೆಗೆ ತೇಜಸ್ವಿ ಸೂರ್ಯರವರು ಉತ್ತರ ನೀಡಲಿ ಎಂದು ಯು.ಟಿ. ಖಾದರ್ ಆಗ್ರಹಿಸಿದರು.
ಈ ವಾರ್ ರೂಂನಲ್ಲಿರುವ 8 ಮಂದಿ ವೈದ್ಯರಲ್ಲಿ ಓರ್ವ ಮಾತ್ರ ಅಲ್ಪಸಂಖ್ಯಾತ. 214 ಮಂದಿ ಕಾಲ್ ಸೆಂಟರ್ನಲ್ಲಿ ಕರೆ ಸ್ವೀಕರಿಸುವವರು ಹಾಗೂ 8 ಮಂದಿ ವೈದ್ಯರಲ್ಲಿ ಬೆಡ್ ಬ್ಲಾಕಿಂಗ್ ಪ್ರಕರಣ ನಡೆದಿದ್ದರೆ ಯಾರೂ ಬೆಂಬಲಿಸಲು ಹೋಗುವುದಿಲ್ಲ. ಆದರೆ, ಸಂಬಂಧ ಪಡದ ಅಧಿಕಾರಿ ಹೆಸರನ್ನು ಇಲ್ಲಿ ತರೋದು.
ಬರೇ 17 ಮಂದಿಯ ಹೆಸರನ್ನು ಮಾತ್ರ ಉಲ್ಲೇಖಿಸೋದು, ಅದಕ್ಕೊಂದು ಟ್ಯಾಗ್ ಕೊಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೊಂದು ಪ್ರಚಾರ ಕೊಡುವ ಹಿಂದಿರುವ ಉದ್ದೇಶವೇನು?.
ಆದ್ದರಿಂದ ಈ ಬಗ್ಗೆ ತೇಜಸ್ವಿ ಸೂರ್ಯ ಅವರಿಗೆ ಸರಿಯಾದ ಮಾಹಿತಿ ಇದೆಯೇ ಅಥವಾ ಮಾಹಿತಿ ಇದ್ದೂ ಇಲ್ಲದಂತೆ ಮಾಡುವುದೇ ಎಂದು ಅವರು ಸ್ಪಷ್ಟ ಪಡಿಸಲಿ ಎಂದು ಖಾದರ್ ಅವರು ಆಗ್ರಹಿಸಿದರು.
ಬೆಂಗಳೂರಿನ ದಕ್ಷಿಣ ವಲಯ ಝೋನ್ನ ಮುಖ್ಯಸ್ಥರು ಯಾರು ಎಂಬುದರ ಬಗ್ಗೆ ಸಚಿವ ಈಶ್ವರಪ್ಪನವರು ಸ್ಪಷ್ಟಪಡಿಸಲಿ. ತುಳಸಿ ಮದ್ದಿನಿ, ವೀರಭದ್ರಯ್ಯನವರೇ ಅಥವಾ ಸರ್ಫ್ರಾಝ್ ಖಾನ್ ಅವರೇ ಎಂದು ಸಚಿವರಾಗಿ ಈಶ್ವರಪ್ಪನರು ಸ್ಪಷ್ಟನೆ ನೀಡಲಿ.
ಅಲ್ಲದೆ ಈ ವಾರ್ ರೂಂನ ಕಾಲ್ ಸೆಂಟರ್ಗಳಲ್ಲಿ ಎಷ್ಟು ಮಂದಿ ಕರೆ ಸ್ವೀಕರಿಸಲು ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡಲಿ. ಈ ಸ್ಪಷ್ಟನೆ ನೀಡಿದ ಬಳಿಕ ಈಶ್ವರಪ್ಪನವರು ಆರೋಪ ಮಾಡಲಿ. ತಪ್ಪಿತಸ್ಥರಾಗಿದ್ದರೂ ಅವರ ಜಾತಿಯ ಉಲ್ಲೇಖದ ಅಗತ್ಯವಿಲ್ಲ.
ಯಾರಾದರೂ ಇದರಲ್ಲಿ ಸಮಾಜಕ್ಕೆ ಮಾರಕವೆನಿಸಿದರೆ ಅವರ ಮೇಲೆ ಕಠಿಣ ಕಾನೂನು ಕ್ರಮವಾಗಲಿ. ಆದರೆ, ಇದರ ಸತ್ಯಾಂಶವನ್ನು ಬದಿಗಿಟ್ಟು ಈ ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರುವುದು ರಾಜ್ಯ ಸರಕಾರದ ಹಿರಿಯ ಸಚಿವರಿಗೆ ಶೋಭೆ ತರುವಂತದ್ದಲ್ಲ. ಮಾಹಿತಿ ಇದ್ದು ಮಾತನಾಡಲಿ ಅಥವಾ ಸ್ಪಷ್ಟನೆ ನೀಡಲಿ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.