ಕೊಣಾಜೆ : ಕೊಣಾಜೆ ಗ್ರಾಮದ ಪಟ್ಟೋರಿ ಹಾಗೂ ಪುಳಿಂಚಾಡಿಯಲ್ಲಿ ಬೆಳಗ್ಗೆ ಸುರಿದ ಭಾರೀ ಮಳೆಗೆ ತಡೆಗೋಡೆ ಕುಸಿದು ಎರಡು ಮನೆಗಳಿಗೆ ಅಪಾರ ಹಾನಿ ಸಂಭವಿಸಿದೆ.
ಪಟ್ಟೋರಿಯಲ್ಲಿ ಶಾಂತಪ್ಪ ಎಂಬುವರ ಬಾಡಿಗೆ ಮನೆಯಲ್ಲಿ ತಿರುಮಲ ಸ್ವಾಮಿ ಎಂಬುವರ ಕುಟುಂಬ ವಾಸವಾಗಿತ್ತು. ಭಾನುವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ತಡೆಗೋಡೆಯು ಕುಸಿದು ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ಈ ಸಂದರ್ಭದಲ್ಲಿ ಮನೆಯೊಳಗಿದ್ದ ಸದಸ್ಯರು ಮನೆಯಿಂದ ಹೊರಗೆ ಓಡಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ.
ಅತಂತ್ರ ಕುಟುಂಬಕ್ಕೆ ಆಶ್ರಯ : ತಡೆಗೋಡೆ ಕುಸಿದು ಅತಂತ್ರ ಸ್ಥಿತಿಯಲ್ಲಿರುವ ತಿರುಮಲ ಸ್ವಾಮಿಯವರ ಕುಟುಂಬಕ್ಕೆ ಅಸೈಗೋಳಿಯ ಪ್ರಕಾಶ್ ಶೆಟ್ಟಿಯವರು ಬೇರೆ ಕಡೆ ಆಶ್ರಯ ಕಲ್ಪಿಸಿ ಸಹಾಯ ಮಾಡಿದ್ದಾರೆ. ಅಲ್ಲದೆ ಪುಳಿಂಚಾಡಿಯ ಆಂಟೊನಿ ವಿನ್ಸೆಂಟ್ ಲೋಬೋ ಅವರ ಮನೆಗೂ ಕೂಡಾ ಭಾನುವಾರ ರಾತ್ರಿ ಸುರಿದ ಮಳೆಗೆ ಪಕ್ಕದ ಮನೆಯ ತಡೆಗೋಡೆ ಕುಸಿದ ಪರಿಣಾಮ ಹಾನಿಗೊಂಡಿದೆ.
ಗೋಡೆ ಬಿರುಕು ಬಿಟ್ಟು ಮನೆಗೆ ಅಪಾರ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗ್ರಾಮ ಕರಣಿಕ ಪ್ರಸಾದ್, ಪಂಚಾಯತ್ ಅಧ್ಯಕ್ಷ ನಝರ್, ಸದಸ್ಯರಾದ ರವಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.