ಬೆಂಗಳೂರು: ನಗರ ಇತ್ತೀಚೆಗೆ ಕಾಂಕ್ರೀಟ್ ಕಾಡಾಗಿದ್ದು, ಮತ್ತೆ ಬೆಂಗಳೂರಿನಲ್ಲಿ ಅರಣ್ಯ ನಿರ್ಮಿಸಲು ಇಲ್ಲೊಂದು ಏರಿಯಾದ ಜನರು ಮುಂದಾಗಿದ್ದಾರೆ.
ಬೆಂಗಳೂರಿನ ದೊಡ್ಡನೆಕ್ಕುಂದಿ ವಾರ್ಡ್ ಗ್ರೀನ್ ಡೊಮೈನ್ ಬಡಾವಣೆಯಲ್ಲಿನ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮಿನಿ ಅರಣ್ಯ ನಿರ್ಮಾಣ ಕಾರ್ಯಕ್ಕೆ ಸಂಸದ ಪಿ.ಸಿ. ಮೋಹನ್ ಆಗಮಿಸಿ ನೆಲವನ್ನು ಅಗೆದು ಒಂದು ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸರ್ಕಾರಿ ಖಾಲಿ ಜಾಗ ಇರುತ್ತದೆಯೋ ಅಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯವರು ಸೇರಿ ಗಿಡಗಳನ್ನು ನೆಡುವ ಮೂಲಕ ಬೆಂಗಳೂರು ನಗರವನ್ನು ಹಸಿರು ನಗರವನ್ನಾಗಿ ರೂಪಿಸಬೇಕು ಎಂದು ಅವರು ಹೇಳಿದರು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಇನ್ನೂ ಬೇರೆ ಬೇರೆ ಸ್ಥಳಗಳಲ್ಲಿ ಇದೆ ರೀತಿಯಲ್ಲಿ ಪರಿಸರ ಕಾಳಜಿ ಬೆಳೆಯುವ ಹಾಗೆ ಮಾಡುತ್ತೇನೆ ಎಂದು ತಿಳಿಸಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಶ್ವೇತಾ ವಿಜಯ್ ಕುಮಾರ್ ಭಾಗವಹಿಸಿದ್ದು ಜಿಡಿಎಲ್ ವತಿಯಿಂದ ಪರಿಸರ ಕಾಳಜಿ ವಹಿಸುವ ಉದ್ದೇಶದಿಂದ ಈ ಮಿನಿ ಅರಣ್ಯ ನಿರ್ಮಾಣ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರತಿ ಮಕ್ಕಳ ಕೈನಲ್ಲೂ ಒಂದೊಂದು ಸಸಿನೆಟ್ಟು ಮಕ್ಕಳಂತೆಯೇ ಗಿಡಗಳನ್ನು ಪೋಷಿಸಬೇಕು ಎಂದು ಮನವಿ ಮಾಡಿದ ಅವರು, 250 ಸಸಿಗಳನ್ನು ಇಂದು ನೆಡಲಾಗಿದ್ದು, ಪಕ್ಷಿಗಳಿಗೆ ಗಿಡಗಳಲ್ಲಿಯೇ ವಾಟರ್ ಪಾಟ್ ಇಡುವ ಮೂಲಕ ಪಕ್ಷಿಗಳಿಗೆ ಸಹ ನೀರು ನೀಡಿ ದಾಹ ನೀಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.