ನವದೆಹಲಿ: ಆರ್‌ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಸಾವಿನ ಬಗ್ಗೆ ವದಂತಿಗಳನ್ನು ತಿಹಾರ್ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ಸದ್ಯಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ತಿಹಾರ್ ಜೈಲಿನಲ್ಲಿರುವ ನಾಯಕ ಶಹಾಬುದ್ದೀನ್ ಅವರು ಕಳೆದ ವಾರ ಕೋವಿಡ್ಗೆ ತುತ್ತಾಗಿದ್ದರು. ಬಳಿಕ ಚಿಕಿತ್ಸೆಗಾಗಿ ಅವರನ್ನು ದೀನ್ದಯಾಲ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ಅವರು ಹೇಳುವಂತೆ ಶಹಾಬುದ್ದೀನ್ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ತಿಹಾರ್ ಜೈಲಿನಲ್ಲಿ ಕೋವಿಡ್ ಸೋಂಕಿನ ಹರಡುವಿಕೆ ನಿರಂತರವಾಗಿ ಹೆಚ್ಚುತ್ತಿದೆ, ಕೈದಿಗಳು ಸೋಂಕಿಗೆ ಒಳಗಾಗುವುದಲ್ಲದೇ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜೈಲಿನ ಮೂಲಗಳ ಪ್ರಕಾರ, ಇದುವರೆಗೆ 200 ಕ್ಕೂ ಹೆಚ್ಚು ಕೈದಿಗಳು ಸೋಂಕಿಗೆ ಒಳಗಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಿಹಾರ್‌ನಲ್ಲಿ ಈವರೆಗೆ ಆರು ಕೈದಿಗಳು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಹಿಂದೆ ಮಾಜಿ ಆರ್‌ಜೆಡಿ ಸಂಸದ ಶಹಾಬುದ್ದೀನ್ ಕೋವಿಡ್ ಕಾರಣದಿಂದ ನಿಧನ ಹೊಂದಿದ್ದಾರೆ ಎಂದು ಟ್ವೀಟ್ ಮಾಡಲಾಗಿತ್ತು. ಆ ಬಳಿಕ ಟ್ವೀಟ್ಅನ್ನು ಅಳಿಸಿ, ಸ್ಪಷ್ಟೀಕರಣವನ್ನು ಬಿಡುಗಡೆ ಮಾಡಲಾಗಿದೆ.