ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಬ್ಬೇಪುರದಲ್ಲಿ ವ್ಯಕ್ತಿಯೊಬ್ಬರನ್ನು ತಿಂದು ಕೊಂದು ಹಾಕಿದ ಹುಲಿರಾಯ ಪತ್ತೆಯಾಗಿಲ್ಲ. ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದರೂ ಅದರ ಸುಳಿವು ಸಿಗಲಿಲ್ಲ. ಆದರೆ, ಚಿರತೆಗಳು ಪತ್ತೆಯಾಗುತ್ತಿವೆ.
ಚೌಡಹಳ್ಳಿ ಗ್ರಾಮದ ಶಿವಮಾದಯ್ಯ (65) ಎಂಬುವರನ್ನು ಹುಲಿ ಕೊಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಕೆರೆ ಅರಣ್ಯ ವಲಯ ಹಾಗೂ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿದ್ದರು. ಕುಂದಕೆರೆ ಅರಣ್ಯದಲ್ಲಿ ಅಳವಡಿಸಿದ್ದ ಕ್ಯಾಮರಾಗಳಲ್ಲಿ 3-4 ಚಿರತೆಗಳು ಪದೇ ಪದೆ ಸೆರೆ ಸಿಕ್ಕಿವೆ. ಆದರೆ, ಹುಲಿ ಮಾತ್ರ ಪತ್ತೆಯಾಗಿಲ್ಲ ಎಂದು ಅರಣ್ಯಾಧಿಕಾರಿ ಮಂಜುನಾಥ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಕೊಂದಿರುವುದು ಚಿರತೆ ಎಂಬ ಶಂಕೆ: ಕೊಂದಿದ್ದು ಹುಲಿಯಲ್ಲ ಚಿರತೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಕುರಿತು ಗಂಭೀರ ತನಿಖೆ ಕೈಗೊಂಡಿದ್ದಾರೆ. ಹುಂಡಿಪುರ, ಕೆಬ್ಬೇಪುರದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯೇ ಕೊಂದಿರಬಹುದು ಎನ್ನಲಾಗಿತ್ತು. ಈಗ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಚಿರತೆಗಳು ಮಾತ್ರ ಕ್ಯಾಮರಾಗೆ ಸೆರೆಯಾಗಿದೆ. ಹುಲಿಯ ಸುಳಿವಿಲ್ಲದ ಕಾರಣ ಮೇಲ್ನೋಟಕ್ಕೆ ಚಿರತೆಯೇ ಕೊಂದಿರಬಹುದು ಎಂದು ಬಂಡೀಪುರ ಸಿಎಫ್ಒ ಬಾಲಚಂದ್ರ ಪ್ರತಿಕ್ರಿಯಿಸಿದ್ದಾರೆ.
ಸ್ಥಳೀಯರ ಪ್ರಕಾರ ಹುಲಿಯೇ ವ್ಯಕ್ತಿಯನ್ನು ಕೊಂದಿದ್ದು ದಪ್ಪ ಉಗುರುಗಳು- ಹಲ್ಲುಗಳೇ ಸಾಕ್ಷಿ ಎಂದು ವಾದಿಸುತ್ತಿದ್ದಾರೆ. ಅರಣ್ಯ ಇಲಾಖೆ ಹುಲಿ ಬದಲಿಗೆ ಚಿರತೆಯೇ ಕೊಂದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹುಂಡಿಪುರದ ಹುಲಿರಾಯ ಮತ್ತಷ್ಟು ನಿಗೂಢನಾಗುತ್ತಿದ್ದು, ಅರಣ್ಯ ಇಲಾಖೆ ಶೀಘ್ರವೇ ಇದಕ್ಕೆ ಇತಿಶ್ರೀ ಹಾಡಬೇಕಿದೆ.