ದಾವಣಗೆರೆ: ಕಾಲುವೆ ನೀರು ಹರಿಸಲು ಸಂಬಂಧಪಟ್ಟಂತೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ ಕಂಡಿತ್ತು. ಕೊಲೆ ಮಾಡಿದ ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ಮೂರನೇ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೊಗ್ಗಳ್ಳಿ ಎಂಬ ಗ್ರಾಮದಲ್ಲಿ ನಡೆದ ಕಲಹ ಓರ್ವನ ಕೊಲೆಯಲ್ಲಿ ಅಂತ್ಯವಾಗಿತ್ತು. 2016 ಆಗಸ್ಟ್ 29ರಂದು ಸಿದ್ದಪ್ಪ, ರೇಣುಕಪ್ಪ, ಕಿರಣ್, ಹೇಮಂತ್ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಜಮೀನಿನ ಹಳೇ ಗಲಾಟೆ ಮನಸ್ಸಿನಲ್ಲಿ ಇಟ್ಟುಕೊಂಡು ಸಹೋದರರಾದ ಬಸವರಾಜಪ್ಪ, ಮಾರುತಿ, ಗಣೇಶ್ ಎಂಬುವವರು ಕಾಲುವೆ ನೀರು ಹರಿಸುವ ಸಂಬಂಧ ಜಗಳ ಆರಂಭಿಸಿದ್ದಾರೆ. ಈ ವೇಳೆ ಸಿದ್ದಪ್ಪನಿಗೆ ಸಲಾಕೆಯಿಂದ ಹೊಡೆದು, ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಕೊಲೆಗೆ ಹನುಂಮತಪ್ಪ, ಲಲಿತಮ್ಮ, ಗಂಗಮ್ಮ ಕುಮ್ಮಕ್ಕು ನೀಡಿದ್ದರು ಎಂದು ಕೊಲೆಯಾಗಿದ್ದ ಸಿದ್ದಪ್ಪನ ಸಹೋದರ ಚಂದ್ರಶೇಖರ್ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಿಪಿಐ ನ್ಯಾಮಗೌಡರ್ ತನಿಖೆ ನಡೆಸಿ ದೋಷರೋಪ ಪಟ್ಟಿ ಸಲ್ಲಿಸಿದ್ದರು. ದೊಗ್ಗಳ್ಳಿಯ ಬಸವರಾಜ್, ಮಾರುತಿಗೆ ಜೀವಾವಧಿ ಶಿಕ್ಷೆ ಹಾಗೂ 37 ಸಾವಿರ ದಂಡ. ಮೂರನೇ ಆರೋಪಿ ಗಣೇಶ್ನಿಗೆ ಮೂರು ವರ್ಷ ಜೈಲು, 12 ಸಾವಿರ ರೂ. ದಂಡವನ್ನು ದಾವಣಗೆರೆಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಕೆಂಗಾಬಾಲಯ್ಯ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.
ನ್ಯಾಯಾಲಯದ ಅಭಿಯೋಜಕರಾದ ಎಸ್.ವಿ.ಪಾಟೀಲ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ನನ್ನ ತಮ್ಮನ ಸಾವಿಗೆ ಈಗ ನ್ಯಾಯ ದೊರಕಿದೆ ಎಂದು ಮೃತ ಸಿದ್ದಪ್ಪನ ಸಹೋದರ ಚಂದ್ರಶೇಖರ್ ಹಾಗೂ ಕುಟುಂಬದವರು ಹೇಳಿದ್ದಾರೆ.