ನವದೆಹಲಿ: ಲಸಿಕೆ ಬಿಕ್ಕಟ್ಟಿನ ಮೇಲ್ವಿಚಾರಣೆಗೆ ಸಮಿತಿಯನ್ನು ರಚಿಸುವಂತೆ ಹಾಗೂ ಕೋವಿಡ್ 19 ರ ಮೂರನೇ ಅಲೆಯನ್ನು ನಿಭಾಯಿಸಲು ಸರ್ಕಾರದ ಸಿದ್ಧತೆಯನ್ನು ಪರಿಶೀಲಿಸುವಂತೆ ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಅವರು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಸೇರಿದಂತೆ ಇತರೆ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ಸರ್ಕಾರದ ಅವೈಜ್ಞಾನಿಕ ವಿಧಾನ ಮತ್ತು ದೂರದೃಷ್ಟಿಯ ಕೊರತೆ ಈ ಪ್ರಸ್ತುತ ದುರಂತಕ್ಕೆ ಕಾರಣವಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ರಕ್ಷಿಸಲು ಸರ್ಕಾರವು ಇನ್ನೂ ಯಾವುದೇ ಕ್ರಿಯಾ ಯೋಜನೆ ಅಥವಾ ಸೂತ್ರವನ್ನು ಈವರೆಗೆ ಹೊಂದಿಲ್ಲ. ಹಾಗೆಯೇ ಭಾರತವು 165 ದಶಲಕ್ಷಕ್ಕಿಂತ ಹೆಚ್ಚು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿದೆ. ಈ ಸಂಬಂಧ ಎಚ್ಚರಿಕೆಯನ್ನು ವಹಿಸಬೇಕು ಎಂದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮೂರನೇ ಅಲೆ ಹಿನ್ನೆಲೆ ಯು.ಎಸ್ನಲ್ಲಿ ಮಕ್ಕಳ ಮೇಲೆ ಫೈಝರ್ ಲಸಿಕೆ ಬಳಸಲು ಸರ್ಕಾರ ಈಗಾಗಲೇ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.
ಪ್ರಸ್ತುತ, ಸಾಂಕ್ರಾಮಿಕ ಸಮಯದಲ್ಲಿ ಔಷಧಗಳು ಮತ್ತು ಸೇವೆಗಳ ಅಗತ್ಯ ಪೂರೈಕೆ ಕುರಿತು ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ನಡೆಸುತ್ತಿದೆ.
ವಿಚಾರಣೆಯೊಂದರಲ್ಲಿ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಮೂರನೇ ಅಲೆಯಿಂದ ಮಕ್ಕಳು ಬಾಧಿತರಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೋಂಕಿತ ಮಕ್ಕಳೊಂದಿಗೆ ಆಸ್ಪತ್ರೆಗಳಿಗೆ ಹೋಗಬೇಕಾಗಿರುವುದರಿಂದ ಪೋಷಕರಿಗೆ ಲಸಿಕೆ ಹಾಕುವ ಅವಶ್ಯಕತೆಯಿದೆ ಎಂದು ಕೇಂದ್ರಕ್ಕೆ ತಿಳಿಸಿದ್ದಾರೆ.