ಬೆಂಗಳೂರು : ಟಿಡಿಆರ್ ವರ್ಗಾವಣೆಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಮುಂದೆ ಐವರು ಆರೋಪಿಗಳು ಹಾಜರಾಗಿದ್ದಾರೆ.
ವಾಲ್ ಮಾರ್ಕ್ ವ್ಯವಸ್ಥಾಪಕ ನಿರ್ದೇಶಕ ರತನ್ ಲಾಥ್, ಅಮಿತ್ ಬೋಳಾರ, ಮಧ್ಯವರ್ತಿಗಳಾದ ಗೌತಮ್, ದೀಪಕ್ ಕುಮಾರ್ ಮತ್ತು ಸುರೇಂದ್ರ ಹಾಜರಾಗಿ ತನಿಖೆಗೆ ಸಹಕಾರ ನೀಡಿದ್ದಾರೆ.
ಇನ್ನು ಈ ಆರೋಪಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದಿದ್ದರು. ಈ ವೇಳೆ ನ್ಯಾಯಾಲಯ ಜೂನ್ 3 ರೊಳಗೆ ಎಸಿಬಿ ಎದುರು ಹಾಜರಾಗಲು ಸೂಚನೆ ನೀಡಿತ್ತು. ಹಾಗೆ ಪ್ರತಿಯೊಬ್ಬರೂ 2 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ನೀಡಬೇಕು. ತನಿಖೆಗೆ ಸಹಕರಿಸಬೇಕು, ಸಾಕ್ಷ್ಯ ನಾಶ ಪಡಿಸುವಂತಿಲ್ಲ, ತನಿಖೆ ಪೂರ್ಣಗೊಳ್ಳುವವರೆಗೂ ಪ್ರತಿ ತಿಂಗಳ 2 ಮತ್ತು 4ನೇ ಸೋಮವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ದೇಶ ಬಿಟ್ಟು ಹೋಗುವಂತಿಲ್ಲ ಎಂದು ಲೋಕಾಯುಕ್ತ ನ್ಯಾಯಾಲಯ ಷರತ್ತು ವಿಧಿಸಿತ್ತು.
ಹೀಗಾಗಿ ಎಸಿಬಿ ಮುಂದೆ ಹಾಜರಾಗಿ ಜಾಮೀನು ಷರತ್ತು ಪೂರ್ಣಗೊಳಿಸಿದ್ದಾರೆ. ಇನ್ನು ಎಸಿಬಿ ಅಧಿಕಾರಿಗಳು ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿಸಂತೆ ತನಿಖೆ ಚುರುಕುಗೊಳಿಸಿದ್ದಾರೆ.