ನವದೆಹಲಿ : ಆಯುರ್ವೇದ ವೈದ್ಯಕೀಯ ಚಿಕಿತ್ಸೆ ಪಡೆಯಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ರಾಜಸ್ಥಾನ ಹೈಕೋರ್ಟ್ ಆದೇಶ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಬಾಪು ಸಲ್ಲಿಸಿದ್ದ ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ನೋಟಿಸ್ ಜಾರಿಗೊಳಿಸಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಜೀವಾವಧಿ ಸೇರಿ ವಿವಿಧ ಜೈಲು ಶಿಕ್ಷೆ ಎದುರಿಸುತ್ತಿರುವ ಅಸಾರಾಮ್ ಬಾಪು ಮನವಿಯ ಮೇರೆಗೆ, ಇಂದು (ಶುಕ್ರವಾರ) ರಾಜಸ್ಥಾನ ಸರ್ಕಾರದ ಪ್ರತಿಕ್ರಿಯೆಯನ್ನು ಸುಪ್ರೀಂಕೋರ್ಟ್ ಕೋರಿದೆ.
ಇನ್ನು, ಅಸಾರಾಮ್ ಪರ ವಕೀಲ ಸಿದ್ಧಾರ್ಥ್ ಲುತ್ರಾ ವಾದ ಮಂಡಿಸಿದರು. “ಅಸಾರಾಮ್‌ಗೆ ಮಧ್ಯಂತರ ಜಾಮೀನು ಅವಶ್ಯಕವಾಗಿದೆ. ಅವರಿಗೆ 83 ವರ್ಷ ವಯಸ್ಸಾಗಿದ್ದು, ಕೆಲ ಆರೋಗ್ಯ ಸಮಸ್ಯೆಗಳಿವೆ. ಅವರಿಗೆ ಚೇತರಿಸಿಕೊಳ್ಳಲು ಎರಡು ತಿಂಗಳ ಕಾಲಾವಕಾಶ ನೀಡಿ. ಸಮಗ್ರ ಚಿಕಿತ್ಸೆಯ ಅವಶ್ಯಕತೆಯಿದೆ” ಎಂದು ಲುತ್ರಾ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ನಾವು ವೈದ್ಯಕೀಯ ತಜ್ಞರಲ್ಲ. ಅಷ್ಟೇ ಅಲ್ಲದೆ, ಶಿಕ್ಷೆಯನ್ನು ಅಮಾನತುಗೊಳಿಸುವುದನ್ನು ನಾವು ಪರಿಗಣಿಸುವುದಿಲ್ಲ. ಹೀಗಾಗಿ, ಉತ್ತರಾಖಂಡದ ಕೇಂದ್ರವೊಂದರಲ್ಲಿ ಚಿಕಿತ್ಸೆಗೆ ಒಳಪಡಿಸಲು ಅನುಮತಿ ನೀಡುವ ಬಗ್ಗೆ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳಿ ನೋಟಿಸ್ ಜಾರಿ ಮಾಡುತ್ತಿದ್ದೇವೆ” ಎಂದಿದ್ದಾರೆ.