ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ಮೇ 30 ರಿಂದ ಮೂರು ದಿನಗಳ ಕಾಲ ಲಿಂ. ಶ್ರೀ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಯವರ 50ನೇ ಪುಣ್ಯಾರಾಧನೆಯ ಸುವರ್ಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅಮರೇಶ್ವರ ಮಠದ ಶ್ರೀನೀಲಕಂಠ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಸುವರ್ಣ ಮಹೋತ್ಸವ ಅಂಗವಾಗಿ 50 ಜೋಡಿ ಆದರ್ಶ ದಂಪತಿಗಳಿಗೆ ಸತ್ಕಾರ ಸಮಾರಂಭ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಅಮರಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಂಚ ಪೀಠದ ಮಹಾಸ್ವಾಮಿಗಳು ಸಮ್ಮುಖದಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭದಲ್ಲಿ ಮೇ 30 ರಂದು ಕಾಶಿ ಜಗದ್ಗುರುಗಳು ಆಗಮಿಸಲಿದ್ದಾರೆ. ಸಂಜೆ ಶ್ರೀ ಸಿದ್ದಾಂತ ಶಿಖಾಮಣಿ ಅವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಕಾರ್ಯಾಧ್ಯಕ್ಷ ಹನಮಂತ ಮಾವಿನಮರದ ಅವರು, ಅಮರಶ್ರೀ ಪ್ರಶಸ್ತಿ ಪುರಸ್ಕಾರವನ್ನು ಜಗದೀಶ ಶಿವಯ್ಯ ಗುಡಗುಂಟಿಮಠ ಅವರಿಗೆ ನೀಡಲಾಗುತ್ತದೆ. ಸಮಾರಂಭದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರು ಸೇರಲಿದ್ದು, ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.