ಬೆಂಗಳೂರು : ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸಬೇಕೇ, ಬೇಡವೇ ಎನ್ನುವ ಕುರಿತು ಸಂಪುಟ ಸಹೋದ್ಯೋಗಿಗಳಲ್ಲೇ ಭಿನ್ನ ಹೇಳಿಕೆಗಳು ವ್ಯಕ್ತವಾಗಿವೆ.
ಈ ನಡುವೆ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಸೇರಿದಂತೆ ಮೂವರು ಸಚಿವರು ಲಾಕ್ಡೌನ್ ಮುಂದುವರೆಸುವ ಕುರಿತು ಒಲವು ತೋರಿದ್ದಾರೆ. ಮತ್ತೊಂದು ಅವಧಿಗೆ ವಿಸ್ತರಣೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಜೂನ್ 7ರವರೆಗೂ ಲಾಕ್ಡೌನ್ 3.O ಜಾರಿಯಲ್ಲಿರಲಿದೆ. ಜೂನ್ 7ರ ನಂತರ ಮುಂದೇನು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.
ಕಳೆದ ಒಂದು ತಿಂಗಳಿನಿಂದ ಜನರು ಗೃಹಬಂಧನಕ್ಕೆ ಒಳಗಾಗಿದ್ದು, ಯಾವಾಗ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಳ್ಳಿದೆ ಎಂದು ಕಾಯುತ್ತಿದ್ದಾರೆ.
ಜನರ ಆಶಯಕ್ಕೆ ಪೂರಕವಾಗಿ ಕೆಲ ಸಚಿವರು ಲಾಕ್ಡೌನ್ ವಿಸ್ತರಣೆ ಬೇಡ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ.ಅಶ್ವತ್ಥ ನಾರಾಯಣ್, ಸದಸ್ಯರಾದ ಆರ್.ಅಶೋಕ್, ಡಾ.ಸುಧಾಕರ್ ಲಾಕ್ಡೌನ್ ಮತ್ತೊಂದು ಅವಧಿಗೆ ವಿಸ್ತರಣೆಯಾಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನಕ್ಕೂ ತಂದಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ತಜ್ಞರ ಸಮಿತಿ ಇಂದು ವರದಿ ಸಲ್ಲಿಕೆ ಮಾಡಿದೆ. ವರದಿಯಲ್ಲಿ ಅಂಶವನ್ನು ಸಿಎಂ ಕಚೇರಿ ಗೌಪ್ಯವಾಗಿರಿಸಿದ್ದು, ಅದರಲ್ಲಿರುವ ಶಿಫಾರಸುಗಳನ್ನು ಮಾಧ್ಯಮಗಳಿಗೆ ನೀಡಲು ನಿರಾಕರಿಸಿದೆ.
ಮೂಲಗಳ ಪ್ರಕಾರ ಮೂರನೇ ಅಲೆಯ ತೀವ್ರತೆ ಎದುರಿಸಲು ಸಿದ್ದತೆ ಮಾಡಿಕೊಳ್ಳಬೇಕಾದಲ್ಲಿ ಎರಡನೇ ಅಲೆ ಸಂಪೂರ್ಣ ನಿಯಂತ್ರಣದಲ್ಲಿರುವಂತಾಗಬೇಕು, ಸದ್ಯ ಈಗ ಲಾಕ್ಡೌನ್ ಕಾರಣದಿಂದ ಸೋಂಕಿನ ಪ್ರಕರಣದಲ್ಲಿ ಇಳಿಕೆಯಾಗುತ್ತಿವೆ.
ಪಾಸಿಟಿವಿಟಿ ಪ್ರಮಾಣವೂ ಇಳಿಕೆಯಾಗುತ್ತಿದೆ. ಆದರೆ, ಈ ಹಂತದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಿದರೆ ಇಷ್ಟು ದಿನದ ಶ್ರಮ ವ್ಯರ್ಥವಾಗಲಿದೆ. ಹಾಗಾಗಿ, ಇನ್ನೊಂದು ಅವಧಿಗೆ ಲಾಕ್ಡೌನ್ ವಿಸ್ತರಣೆ ಮಾಡಬೇಕು ಎನ್ನುವ ಅಂಶ ವರದಿಯಲ್ಲಿದೆ ಎನ್ನಲಾಗಿದೆ.
ವರದಿ ಬಗ್ಗೆ ಸಿಎಂ ಯಡಿಯೂರಪ್ಪ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದು, ವಿಸ್ತೃತ ಚರ್ಚೆಯ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಜಾರಿಯಲ್ಲಿರುವ ಲಾಕ್ಡೌನ್ ಅವಧಿ ಮುಗಿಯುವ ಎರಡು ದಿನದ ಮೊದಲು ಮತ್ತೊಮ್ಮೆ ತಜ್ಞರ ಸಮಿತಿ ಸಲಹೆ ಪಡೆಯಲು ಸಿಎಂ ನಿರ್ಧರಿಸಿದ್ದಾರೆ.
ಅಂದಿನ ಪಾಸಿಟಿವಿಟಿ ದರದ ಅನ್ವಯ ಮುಂದಿನ ನಿರ್ಧಾರ ಕೈಗೊಳ್ಳುವ ಚಿಂತನೆ ನಡೆಸಿದ್ದಾರೆ. ಆದರೂ ಮತ್ತೊಂದು ಅವಧಿಗೆ ಲಾಕ್ಡೌನ್ ಮುಂದುವರೆಸುವ ಬಗ್ಗೆ ಸಿಎಂ ಕೂಡ ಒಲವು ಹೊಂದಿದ್ದಾರೆ.
ಆದರೆ, ಅದು ಈಗಿರುವಂತೆ 14 ದಿನದ ಬದಲು 7 ದಿನದ ಲಾಕ್ಡೌನ್ ಜಾರಿ ಎನ್ನಲಾಗಿದೆ. ಬಹುತೇಕ ಹೆಚ್ಚುವರಿಯಾಗಿ ಮತ್ತೊಂದು ವಾರ ರಾಜ್ಯದ ಜನರು ಗೃಹವಾಸ ಅನುಭವಿಸಬೇಕಾಗಲಿದೆ ಎನ್ನಲಾಗಿದೆ.