ಅಮೇಠಿ: ಅದು ಕಾಂಗ್ರೆಸ್ನ ಭದ್ರಕೋಟೆ. ಬರೋಬ್ಬರಿ ಎರಡು ದಶಕದಿಂದ ಕಾಂಗ್ರೆಸ್ ಪಕ್ಷವೇ ಇಲ್ಲಿ ಮತ್ತೆ ಮತ್ತೆ ಆರಿಸಿ ಬಂದಿತ್ತು. ಕಾಂಗ್ರೆಸ್ ಹೊರತಾದ ಆಲೋಚನೆಯೇ ಇಲ್ಲಿನ ಮತದಾರರಲ್ಲಿ ಇರಲಿಲ್ಲ. ಇಂತಹ ಕ್ಷೇತ್ರದಲ್ಲಿ ಹೆಣ್ಣುಮಗಳೊಬ್ಬರು ಮ್ಯಾಜಿಕ್ ಮಾಡಿದ್ದಾರೆ.ಅಸಾಧ್ಯ ಎನಿಸಿದ್ದ ಕಾರ್ಯವನ್ನು ಮಾಡಿ ತೋರಿಸಿದ್ದಾರೆ. ಕಳೆದ ಬಾರಿ ಸೋಲಿನ ಸೂಚನೆ ನೀಡಿ, ಈ ಬಾರಿ ಸೋಲಿಸಿ ಸ್ಮೃತಿ ಇರಾನಿ ಎನ್ನುವ ದಿಟ್ಟ ಹೆಣ್ಣು ಮಗಳು ಅಮೇಠಿಯಲ್ಲಿ ಕಮಲ ಬಾವುಟವನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ.
ಪ್ರಚಾರದಲ್ಲಿ ರಾಹುಲ್ ಗಾಂಧಿ ಟೀಕಿಸಿದ ಸ್ಮೃತಿ ಇರಾನಿ
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಹುಲ್ ಗಾಂಧಿಗೆ ತೀವ್ರ ಸ್ಪರ್ಧೆಯೊಡ್ಡಿದ್ದರು. ಸುಲಭವಾಗಿ ಅಮೇಠಿಯಲ್ಲಿ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದ್ದ ರಾಗಾ ಜಸ್ಟ್ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಪರೋಕ್ಷವಾಗಿ ಕಳೆದ ಬಾರಿ ಸೋಲನ್ನು ತೋರಿಸಿದ್ದ ಸ್ಮೃತಿ ಇರಾನಿ ಈ ಬಾರಿ ಅದನ್ನು ಸಾಧಿಸಿ ತೋರಿಸಿದ್ದಾರೆ. ಈ ಬಾರಿಯ ಪ್ರಚಾರದ ವೇಳೆ ರಾಹುಲ್ ಗಾಂಧಿ ಓರ್ವ ನಾಪತ್ತೆಯಾದ ಸಂಸದ ಎಂದು ಜರಿಯುತ್ತಲೇ ಮತದಾರರನ್ನು ತಮ್ಮತ್ತ ಸೆಳೆದುಕೊಂಡಿದ್ದರು. ಅಮೇಠಿಯಲ್ಲಿನ ಸ್ಮೃತಿ ಇರಾನಿ ಗೆಲುವು ಪಕ್ಷಕ್ಕೆ ಉತ್ತಮ ಬೂಸ್ಟ್ ನೀಡೋದಂತೂ ಸತ್ಯ. ಪ್ರಧಾನಿ ಅಭ್ಯರ್ಥಿಯನ್ನು ಅವರದ್ದೇ ನೆಲದಲ್ಲಿ ಸೋಲಿಸಿದ ಸ್ಮೃತಿ ಇರಾನಿ ಸಾಧನೆ ಸಣ್ಣದೇನಲ್ಲ.
ಸ್ವಕ್ಷೇತ್ರದಲ್ಲೇ ಮುಗ್ಗರಿಸಿದ ಪ್ರಧಾನಿ ಅಭ್ಯರ್ಥಿ
2014ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರೂ ಸಹ ಸ್ಮೃತಿ ಇರಾನಿ ಕ್ಷೇತ್ರಕ್ಕೆ ರಾಹುಲ್ ಗಾಂಧಿಗಿಂತ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. 2019ರ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಕಳೆದ ಐದು ವರ್ಷದಲ್ಲಿ ಸ್ಮೃತಿ ಇರಾನಿ ಕ್ಷೇತ್ರದಲ್ಲಿ ಉತ್ತಮ ಜನಸಂಪರ್ಕ ಇರಿಸಿಕೊಂಡಿದ್ದರು. ಆಗಾಗ ಕ್ಷೇತ್ರಕ್ಕೆ ವಿಸಿಟ್ ನೀಡುತ್ತಾ ಬಿಜೆಪಿ ಪರ ಅಲೆಯನ್ನು ನಿಧಾನವಾಗಿ ಪಸರಿಸಿದ್ದರು. ಸ್ಮೃತಿ ಇರಾನಿಯ ಈ ಜನಸಂಪರ್ಕ ವರ್ಕೌಟ್ ಆಗಿದೆ.
ಅಮೇಠಿ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಮರೀಚಿಕೆ!
ರಾಹುಲ್ ಗಾಂಧಿಯ ಹ್ಯಾಟ್ರಿಕ್ ಗೆಲುವಿನ ಹೊರತಾಗಿಯೂ ಅಮೇಠಿ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ತುಂಬಾ ಹಿಂದುಳಿದಿದೆ. ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ಸ್ಮೃತಿ ಇರಾನಿ ಮೇಲೆ ಜನತೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಶಿಕ್ಷಣ, ರಸ್ತೆ, ನೀರಾವರಿ ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲೇ ಬಗೆಹರಿಸುವ ಸವಾಲ ಸ್ಮೃತಿ ಇರಾನಿ ಮೇಲಿದೆ.