ಸಕಲೇಶಪುರ : ಬಿತ್ತನೆ ಮಾಡಲು ಭತ್ತದ ಬೀಜ ಕೊಳ್ಳಲು ರೈತರು ನೂಕುನುಗ್ಗಲು ನಡೆಸಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಯ್ ಕುಮಾರ್ ಖುದ್ದು ಲಾಠಿ ಹಿಡಿದು ರೈತರನ್ನು ಸಮಾಧಾನಿಸಿ ಬಿತ್ತನೆ ಬೀಜದ ವಿತರಣೆ ಮಾಡಿಸಿದ ಘಟನೆ ನಡೆದಿದೆ.
ಕೃಷಿ ಇಲಾಖೆಯ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಪಡೆಯಲು ರೈತರು ಮುಂಜಾನೆಯಿಂದಲೇ ಕ್ಯೂ ನಿಂತಿದ್ದಾರೆ. ಈ ವೇಳೆ ನೂಕುನುಗ್ಗಲು ನಡೆಸಿದ್ದು, ಹಲವು ಗೊಂದಲಗಳಿಗೆ ಕಾರಣವಾಗಿತ್ತು.
ಕೃಷಿ ಇಲಾಖೆಯ ಸಿಬ್ಬಂದಿ ಒಬ್ಬೊಬ್ಬರಿಗೆ ಬಿತ್ತನೆ ಬೀಜ ಪಡೆಯಲು ದಾಖಲಾತಿ ಪರಿಶೀಲಿಸಿ ಆನ್ಲೈನ್ ಎಂಟ್ರಿ ಮಾಡುತ್ತಿದ್ದರಿಂದ ಒಬ್ಬ ರೈತನಿಗೆ ಬಿತ್ತನೆ ಬೀಜ ನೀಡಲು ಕನಿಷ್ಠ 20 ನಿಮಿಷ ಬೇಕಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಯ್ ಕುಮಾರ್ ಖುದ್ದು ಲಾಠಿ ಹಿಡಿದು, ಸಾಲಿನಲ್ಲಿ ನಿಲ್ಲಿಸಿ ಅವರೇ ಅರ್ಜಿ ಸ್ವೀಕಾರ ಮಾಡುವ ಕೌಂಟರ್ನಲ್ಲಿ ನಿಂತು ರೈತರಿಂದ ದಾಖಲಾತಿ ಹಾಗೂ ಹಣ ಪಡೆದು ಬಿತ್ತನೆ ಬೀಜ ನೀಡುವ ಕಾರ್ಯಕ್ಕೆ ವೇಗ ನೀಡಿದರು.
ಇದರಿಂದ ಬಿತ್ತನೆ ಬೀಜ ವೇಗವಾಗಿ ರೈತರಿಗೆ ದೊರಕುವಂತಾಯಿತು. ನೂರಾರು ರೈತರು ತಹಶೀಲ್ದಾರ್ರವರ ಜನಪರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಈ ಬಗ್ಗೆ ಮಾತನಾಡಿದ ಅವರು, ನಿಧಾನವಾಗಿ ಬಿತ್ತನೆ ಬೀಜ ನೀಡುತ್ತಿರುವುದನ್ನು ನೋಡಿ ಕ್ರಮಕೈಗೊಂಡಿದ್ದೇನೆ. ರೈತರು ಆತಂಕ ಪಡುವುದು ಬೇಡ. ತಾಲೂಕಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ತೊಂದರೆಯಿಲ್ಲ. ಎಲ್ಲಾ ರೈತರಿಗೂ ದೊರಕುವಷ್ಟು ಸಂಗ್ರಹ ಇದೆ ಎಂದರು.