ಮಂಗಳೂರು: ಅನುಮತಿ ಇಲ್ಲದೆ ಸಂಭ್ರಮಾಚರಣೆ ಮಧ್ಯೆ ಪಟಾಕಿ ಸಿಡಿಸಿದವರನ್ನು ತಡೆದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಮೆಚ್ಚಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಶುಕ್ರವಾರ ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಗುರುವಾರ ಅವರ ಬೆಂಬಲಿಗರು ನಗರದ ಕದ್ರಿ ರಸ್ತೆಯ ಬಿಜೆಪಿ ಚುನಾವಣಾ ಕಚೇರಿ ಮುಂಭಾಗ ಪೊಲೀಸರ ವಿರೋಧದ ನಡುವೆಯೂ ಪಟಾಕಿ ಸಿಡಿಸಿದರು.
ಸಂಭ್ರಮಾಚರಣೆಯ ಸಂದರ್ಭ ಮಾರ್ಗದ ಮಧ್ಯೆ ಪಟಾಕಿ ಸಿಡಿಸಲು ಯಾವುದೇ ಪರವಾನಿಗೆ ಇರಲಿಲ್ಲ. ಆದರೆ, ಅದನ್ನು ವಿರೋಧಿಸಿ ಕೆಲವರು ಪಟಾಕಿ ಸಿಡಿಸಿದ್ದರು. ಈ ಸಂದರ್ಭ ಪೊಲೀಸ್ ಸಿಬ್ಬಂದಿ ಅವರನ್ನು ನಿಭಾಯಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಕೆಲವರು ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಇವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಸಂದರ್ಭ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ಇಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಮ್ಮ ಕಚೇರಿಯಲ್ಲಿ ಅಭಿನಂದನಾ ಪತ್ರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.