ಬೆಂಗಳೂರು : ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತವಾಗಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಕೋವಿಡ್ ಸಂಕಷ್ಟದ ಪರಿಹಾರವಾಗಿ 5000 ರೂಪಾಯಿ ನೀಡುವುದಾಗಿ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಘೋಷಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಯಲ್ಲಿ 384 ನೋಂದಾಯಿತ ಪ್ರವಾಸಿ ಗೈಡ್‍ಗಳಿದ್ದಾರೆ. ಅವರೆಲ್ಲರಿಗೂ ಕೋವಿಡ್ ಸಂಕಷ್ಟದ ಸಮಯದಲ್ಲಿ ನೆರವಾಗಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬರಿಗೂ ತಲಾ 5000 ರೂ. ಬಿಡುಗಡೆ ಮಾಡಲು ಆದೇಶಿಸಿದ್ದಾರೆ.
ಹೋಟೆಲ್ ಕಾರ್ಮಿಕರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಯೋಜನೆಯಡಿ 3000 ರೂ. ನೀಡಲು ಸಹ ಆರ್ಥಿಕ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದೆ. ಆತೀ ಶೀಘ್ರದಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಖನಿಜ ಭವನದಲ್ಲಿರುವ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಕಚೇರಿಯಲ್ಲಿ ಇಂದು ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಕೋವಿಡ್ ಲಾಕ್‌ಡೌನ್‌ನಿಂದ ಪ್ರವಾಸೋದ್ಯಮ ಕ್ಷೇತ್ರದ ಮೇಲಾಗಿರುವ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದರು. ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಪದಾಧಿಕಾರಿಗಳ ಜೊತೆ ಸಹ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸೊಸೈಟಿಯ ಪದಾಧಿಕಾರಿಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಕಷ್ಟಗಳನ್ನು ವಿವರಿಸಿ ಪರಿಹಾರ ನೀಡುವಂತೆ ಮನವಿ ಮಾಡಿದರು. ಆಸ್ತಿ ತೆರಿಗೆಯನ್ನು ಮನ್ನಾ ಮಾಡಬೇಕು. ಮದ್ಯ ಪರವಾನಿಗೆ ಶುಲ್ಕವನ್ನು ಶೇ.50ರಷ್ಟು ಮನ್ನಾ ಮಾಡಿ ಉಳಿದ ಶೇ.50ರಷ್ಟು ಶುಲ್ಕ ಕಟ್ಟಲು ಈ ವರ್ಷದ ಡಿಸೆಂಬರ್ ಅಂತ್ಯದವರೆಗೆ ಸಮಯ ವಿಸ್ತರಿಸಬೇಕು ಹಾಗೂ ವಿದ್ಯುತ್‍ಚ್ಛಕ್ತಿ ದರದಲ್ಲಿ ರಿಯಾಯಿತಿ ನೀಡಬೇಕು.
ಪ್ರವಾಸೋದ್ಯಮ ವಾಹನಗಳ ತೆರಿಗೆಯನ್ನು ಆರು ತಿಂಗಳ ಅವಧಿಗೆ ಮನ್ನಾ ಮಾಡಬೇಕು. ಪ್ರವಾಸಿ ವಾಹನಗಳನ್ನು ಚಲಾಯಿಸುತ್ತಿರುವ ಚಾಲಕರಿಗೆ 3000 ರೂ.ಗಳ ಕೋವಿಡ್ ಪರಿಹಾರ ಹಣವಾಗಿ ನೀಡಬೇಕು. ರಾಜ್ಯದಲ್ಲಿ ಓಲಾ, ಉಬರ್ ಸೇರಿದಂತೆ ಒಟ್ಟು 3 ಲಕ್ಷ 30 ಸಾವಿರ ಪ್ರವಾಸಿ ವಾಹನ ಚಾಲಕರಿದ್ದಾರೆ. ಅವರೆಲ್ಲರಿಗೂ ಕೋವಿಡ್ ಪ್ಯಾಕೇಜ್ ಹಣ ನೀಡಬೇಕೆಂದು ಒತ್ತಾಯಿಸಿದರು.
ಜೂನ್ ತಿಂಗಳ 21ರಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್‍ಗಳನ್ನು ತೆಗೆಯಲು ಅವಕಾಶ ನೀಡಬೇಕು. ಟೂರ್ ಆಪರೇಟರ್ಸ್ ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಬೇಕೆಂದು ಸಹ ಮನವಿ ಮಾಡಿದರು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೆಎಸ್‌ಎಫ್‌ಸಿಯಿಂದ ತೆಗೆದುಕೊಂಡಿರುವ ಸಾಲದ ಮೇಲಿನ ಬಡ್ಡಿಗೆ ರಿಯಾಯಿತಿ ಕೊಡಿಸಬೇಕು ಎಂದು ಸಹ ಕೋರಿದರು.
ರಾಜ್ಯದಲ್ಲಿರುವ ಎಲ್ಲಾ ಹೋಟೆಲ್‍ಗಳಿಗೂ, ಸ್ಟಾರ್ ಹೋಟೆಲ್‍ಗಳಿಗೆ ನೀಡಿರುವ ಕೈಗಾರಿಕಾ ಸ್ಥಾನಮಾನ ವಿಸ್ತರಿಸಬೇಕೆಂದು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಅಧ್ಯಕ್ಷ ಕೆ.ಶ್ಯಾಮರಾಜ್, ಉಪಾಧ್ಯಕ್ಷ ವಿನಿತ್ ವರ್ಮಾ, ಕಾರ್ಯದರ್ಶಿ ಮಹಾಲಿಂಗಯ್ಯ ಇವರು ಸಚಿವರಿಗೆ ಮನವಿ ಪತ್ರ ನೀಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಜೂನ್ ತಿಂಗಳ ಅಂತ್ಯಕ್ಕೆ ವಿಜಯಪುರ, ಹಂಪಿ, ಬಾದಾಮಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ತ್ರೀ ಸ್ಟಾರ್ ಹೋಟೆಲ್‍ಗಳಿಗೆ ಶಿಲಾನ್ಯಾಸ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ತಿಂಗಳ ಅಂತ್ಯಕ್ಕೆ ಪ್ರವಾಸೋದ್ಯಮ ನೀತಿಗೆ ಮಾರ್ಗಸೂಚಿಗಳನ್ನು ಅಳವಡಿಸಿ, ಸರ್ಕಾರಿ ಆದೇಶ ಹೊರಡಿಸಲು ಹಾಗೂ ಸ್ಟಾರ್ ಹೋಟೆಲ್‍ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿರುವ ಬಗ್ಗೆ ಸಹ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಹೆಲಿಟೂರಿಸಂ, ಸಿ-ಪ್ಲೇನ್ ಹಾಗೂ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ವಾಟರ್ ಸ್ಪೋರ್ಟ್ಸ್ ಆರಂಭಿಸುವುದು, ನಂದಿಬೆಟ್ಟ ಹಾಗೂ ಇತರ ಕಡೆ ರೋಪ್-ವೇಗಳನ್ನು ನಿರ್ಮಾಣ ಮಾಡುವ ಯೋಜನೆಗಳಿಗೆ ವೇಗ ನೀಡುವಂತೆ ಇದೇ ವೇಳೆ ಅಧಿಕಾರಿಗಳಿಗೆ ಆದೇಶಿಸಿದರು. ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಪ್ರವಾಸೋದ್ಯಮ ಯೋಜನೆಗಳಿಗೆ ಆದ್ಯತೆ ಮೇಲೆ ಕ್ರಮಕೈಗೊಂಡು ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ, ನಿರ್ದೇಶಕಿ ಸಿಂಧು ಬಿ.ರೂಪೇಶ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮಾ ಹಾಗೂ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್ ಪುಷ್ಕರ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.