ಬೆಂಗಳೂರು : ಏರಿಯಾದಲ್ಲಿ ಹವಾ ಬೆಳೆಸಿಕೊಳ್ಳಲು ರೌಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರು ಮಂದಿ ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ಸೈಯದ್ ನವಾಜ್, ಸಯ್ಯದ್ ಶರೀಫ್, ಸಯ್ಯದ್ ಆರೀಫ್, ತಬ್ರೇಜ್ ಬೇಗ್, ಗಣೇಶ್ ಹಾಗೂ ರಮೇಶ್ ಬಂಧಿತ ಆರೋಪಿಗಳು. ಜೂನ್ 6ರಂದು ಕೋಗಿಲು ರಸ್ತೆಯಲ್ಲಿ ಯಲಹಂಕ ಠಾಣೆಯ ರೌಡಿಶೀಟರ್ ಲೋಕೇಶ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಗಾಯಾಳುವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯಕೀಯ ವೆಚ್ಚವನ್ನು ಪೊಲೀಸರೇ ಭರಿಸಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಗಾಯಾಳು ಲೋಕೇಶ್ ಹಾಗೂ ಸೈಯ್ಯದ್ ನವಾಜ್ ನಡುವೆ ಈ ಹಿಂದೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆಯಾಗಿತ್ತು. ಅಲ್ಲದೇ ಪ್ರಕರಣ 5ನೇ ಆರೋಪಿ ರಮೇಶ್ ಸಹ ಏರಿಯಾದಲ್ಲಿ ಹವಾ ಮೆಂಟೈನ್ ಮಾಡಲು ಹಾತೊರೆಯುತ್ತಿದ್ದ. ಈ ವೇಳೆ ಈತನ ಸಹಚರರಾದ ಬಂಧಿತ ಆರೋಪಿಗಳಿಗೆ ಲೋಕೇಶ್‌ನನ್ನು ಹೊಡೆಯಲು ಕುಮ್ಮಕ್ಕು ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.