ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರೆ ಎನ್ನುವ ಅಚಲ ವಿಶ್ವಾಸ ಎನ್ಡಿಎ ಮೈತ್ರಿಕೂಟದಲ್ಲಿ ಕೇಳಿಬರುತ್ತಿದ್ದರೆ ಅತ್ತ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಪ್ರಾದೇಶಿಕ ಪಕ್ಷಗಳ ಬಲವರ್ಧನೆ ಮಾಡಿ ಪರ್ಯಾಯ ರಾಜಕಾರಣದ ಕಿಡಿ ಹೊತ್ತಿಸುವ ಸನ್ನಾಹದಲ್ಲಿದ್ದಾರೆ.
ಸೋಮವಾರ ಕೇರಳ ಸಿಎಂ ಪಿಣರಾಯಿ ವಿಜಯನ್ರನ್ನು ಭೇಟಿಯಾಗಿದ್ದಾರೆ. ಮಹಾಫಲಿತಾಂಶದಲ್ಲಿ ಕಿಂಗ್ ಮೇಕರ್ ಆಗಲು ಹವಣಿಸುತ್ತಿರುವ ಕೆಸಿಆರ್, ರಾಷ್ಟ್ರ ರಾಜಕಾರಣದ ಪ್ರಸ್ತುತ ಸ್ಥಿತಿ-ಗತಿಗಳ ಬಗ್ಗೆ ಕೇರಳ ಸಿಎಂ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಮಾತುಕತೆ ಬಳಿಕ ಮಾತನಾಡಿದ ಕೇರಳ ಸಿಎಂ, ಕೆಸಿಆರ್ ಜೊತೆಗಿನ ಮೀಟಿಂಗ್ ಅತ್ಯಂತ ಫಲಪ್ರದವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಸಂಪೂರ್ಣ ಬಹುಮತ ಪಡೆಯುವುದು ಸಾಧ್ಯವಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸಲಿವೆ. ಆದರೆ ಇಂದಿನ ಮಾತುಕತೆಯಲ್ಲಿ ಪ್ರಧಾನಿ ಅಭ್ಯರ್ಥಿ ಬಗ್ಗೆ ಚರ್ಚಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕೆಸಿಆರ್ ಮುಂದಿನ ಐದು ದಿನಗಳ ಕಾಲ ಸರಣಿ ಮಾತುಕತೆ ಆಯೋಜನೆ ಮಾಡಿದ್ದು, ಮೊದಲಿಗೆ ಕೇರಳ ಸಿಎಂರನ್ನು ಭೇಟಿಯಾಗಿದ್ದಾರೆ. ಆದರೆ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ರನ್ನು ಮೇ 13ರಂದು ಕೆಸಿಆರ್ ಭೇಟಿ ಮಾಡಬೇಕಿತ್ತು. ಚುನಾವಣಾ ಪ್ರಚಾರದ ಕಾರಣ ನೀಡಿ ಸ್ಟಾಲಿನ್ ಮಾತುಕತೆಯಲ್ಲಿ ಭಾಗಿಯಾಗುವುದು ಅನುಮಾನ ಎನ್ನಲಾಗಿದೆ. ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.