ಮುಂಬೈ: 12 ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಿರುವ 6 ಪಂದ್ಯಗಳಲ್ಲೂ ಸೋಲು ಕಾಣುತ್ತಿರುವ ಆರ್ಸಿಬಿ ತಂಡದ ನಾಯಕನಾಗಿರುವ ಕೊಹ್ಲಿಯನ್ನು ವಿಶ್ವಕಪ್ ತಂಡಕ್ಕೆ ನಾಯಕನನ್ನಾಗಿ ಮಾಡುವುದು ಬೇಡ ಎಂಬ ಮಾತುಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿವೆ.
ಸತತ 6ನೇ ಸೋಲುಕಂಡ ಆರ್ಸಿಬಿ ಐಪಿಎಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ನಾಯಕತ್ವದಲ್ಲಿ ಪದೇಪದೆ ಕೊಹ್ಲಿ ವಿಫಲರಾಗುತ್ತಿದ್ದಾರೆ. ತಂಡದ ಆಯ್ಕೆ, ಫೀಲ್ಡಿಂಗ್ ಸಂಯೋಜನೆಯಲ್ಲಿ ಕೊಹ್ಲಿ ವಿಫಲರಾಗುತ್ತಿರುವ ಕಾರಣ ಕೊಹ್ಲಿಗೆ ಭಾರತ ತಂಡದ ನಾಯಕತ್ವ ನೀಡುವ ಬದಲು ಮುಂಬೈ ತಂಡದ ನಾಯಕನಾಗಿರುವ ರೋಹಿತ್ ಶರ್ಮಾಗೆ ನೀಡಬೇಕು ಎಂದು ಟ್ವಿಟರ್ನಲ್ಲಿ ಅಭಿಮಾನಿಗಳು ಬೇಡಿಕೆಯಿಡುತ್ತಿದ್ದಾರೆ.
ಮುಂಬೈ ತಂಡ ಶನಿವಾರ ಹೈದರಾಬಾದ್ನಂತಹ ಬಲಿಷ್ಠ ತಂಡಕ್ಕೆ 137 ರನ್ಗಳ ಟಾರ್ಗೆಟ್ ನೀಡಿ 40 ರನ್ಗಳಿಂದ ಗೆಲುವು ಸಾಧಿಸಿತ್ತು. ಕಡಿಮೆ ರನ್ ಟಾರ್ಗೆಟ್ ನೀಡಿದರೂ ರೋಹಿತ್ ಶರ್ಮಾ ತಮ್ಮ ಕ್ಷೇತ್ರ ರಕ್ಷಣೆ ಸಂಯೋಜನೆ, ಬೌಲರ್ಗಳ ಆಯ್ಕೆಯಿಂದ ತಂಡಕ್ಕೆ ಗೆಲುವು ದೊರೆಕಿಸಿಕೊಟ್ಟಿದ್ದರು.
ಆದರೆ, ಕೊಹ್ಲಿ ತಂಡ 200 ರನ್ಗಳಿಸಿದರೂ ಪಂದ್ಯ ಗೆಲ್ಲಲು ವಿಫಲವಾಗುತ್ತಿದೆ. ಸಾಲು ಸಾಲು ಸೋಲುಗಳಿಂದ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಇದು ವಿಶ್ವಕಪ್ನಲ್ಲಿ ಭಾರತಕ್ಕೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಕೆಲವರ ವಾದವಾಗಿದೆ.
ಮತ್ತೆ ಕೆಲವರು ಕೊಹ್ಲಿ ಒಬ್ಬ ಅದ್ಭುತ ಬ್ಯಾಟ್ಸ್ಮನ್ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ, ನಾಯಕತ್ವ ನಿಭಾಯಿಸುವುದರಲ್ಲಿ ಕೊಹ್ಲಿಗಿಂತ ರೋಹಿತ್ ಉತ್ತಮ. ಆದ್ದರಿಂದ ಕೊಹ್ಲಿ ಬ್ಯಾಟ್ಸ್ಮನ್ ಆಗಿ ಆಡಿದರೆ ಒಳೀತು ಎನ್ನುತ್ತಿದ್ದಾರೆ.
ಅಭಿಮಾನಿಗಳು ಅಭಿಪ್ರಾಯ ಏನೇ ಆದರೂ ರೋಹಿತ್ ಇತ್ತೀಚೆಗಷ್ಟೇ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಐಪಿಎಲ್ನಲ್ಲಿ ಆಟಗಾರರು ನೀಡುವ ಪ್ರದರ್ಶನದ ಮೇಲೆ ವಿಶ್ವಕಪ್ ತಂಡಕ್ಕೆ ಆಯ್ಕೆಮಾಡಲಾಗುವುದಿಲ್ಲ, ಬದಲಾಗಿ ಕಳೆದ 4 ವರ್ಷಗಳಿಂದ ಸೀಮಿತ ಓವರ್ಗಳ ಆಟದಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಬೇಕು ಎಂದಿದ್ದರು.
ರೋಹಿತ್ ಹೇಳಿಕೆಯಂತೆ ನೋಡುವುದಾದರೆ ಕೊಹ್ಲಿ ಕಳೆದ 4 ವರ್ಷಗಲ್ಲಿ ಸಹಸ್ರಾರು ರನ್ಗಳಿಸಿದ್ದಾರೆ. ನಾಯಕತ್ವದಲ್ಲಿ ಇಂಗ್ಲೆಂಡ್,ಕಿವೀಸ್, ಆಸ್ಟ್ರೇಲಿಯಾ,ದ.ಆಫ್ರಿಕಾ ನೆಲದಲ್ಲಿ ಸರಣಿಗಳನ್ನು ಗೆದ್ದು ದಾಖಲೆ ಮಾಡಿದ್ದಾರೆ. ಇದನ್ನು ಗಮನಿಸಿದರೆ ಕೇವಲ ಐಪಿಎಲ್ನಿಂದ ಕೊಹ್ಲಿಯಂತಹ ವಿಶ್ವಶ್ರೇಷ್ಠ ನಾಯಕ,ಆಟಗಾರನ ಚತುರತೆಯನ್ನು ಅಳೆಯುವುದು ಕೂಡ ಸೂಕ್ತವಲ್ಲ.