ಮೈಸೂರು: ಬಿರುಗಾಳಿ, ಮಳೆಯಿಂದ ಮನೆಯ ಮೇಲ್ಛಾವಣಿಯ ಕಲ್ನಾರ್ ಶೀಟ್ ಹಾರಿ ಜನರ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಪೆಂಜಳ್ಳಿ ಹಾಡಿ ಗ್ರಾಮದಲ್ಲಿ ನಡೆದಿದೆ.
ಹಾಡಿ ನಿವಾಸಿಗಳಾದ ಗೌರಮ್ಮ, ಸುನೀತ, ಪ್ರಮೀಳ, ಲಕ್ಷ್ಮಿ ಕಲ್ನಾರ್ ಶೀಟ್ ಬಿದ್ದು ಗಾಯಗೊಂಡವರು.
ಕಳಪೆ ಮನೆ ಆರೋಪ: ಪೆಂಜಳ್ಳಿ ಹಾಡಿಯಲ್ಲಿ 40 ಜೇನುಕುರುಬ ಕುಟುಂಬಗಳು ವಾಸವಾಗಿವೆ. ಕಾಡಿನಲ್ಲಿದ್ದ ಈ ಜನಾಂಗವನ್ನು ಕರೆ ತಂದು ರಾಜ್ಯ ಸರ್ಕಾರದಿಂದ ಮನೆ ನೀಡಲಾಗಿದೆ. 2 ಲಕ್ಷ ರೂ. ವೆಚ್ಚದಲ್ಲಿ ಕಟ್ಟಲಾಗಿರುವ ಮನೆಗಳು ಈಗಾಗಲೇ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡು, ಕಲ್ನಾರ್ ಶೀಟ್ಗಳು ಬಿರುಗಾಳಿ ಹಾಗೂ ಮಳೆಗೆ ಹಾರಿವೆ. ಇಂಥ ಅಪಾಯಕಾರಿ ಮನೆಗಳಲ್ಲಿ ವೃದ್ಧರು, ಮಕ್ಕಳ ಜತೆ ಹೇಗೆ ಬದುಕುವುದು ಎಂಬ ಚಿಂತೆ ಕಾಡತೊಡಗಿದೆ. ಅಲ್ಲದೇ ತಾರಕ ಜಲಾಶಯ ಸಮೀಪವೇ ಇರುವುದರಿಂದ ನೀರಿಗಾಗಿ ಬರುವ ಆನೆಗಳಿಂದ ಅಪಾಯವು ಎದುರಾಗಿದೆ. ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಹಾಡಿ ನಿವಾಸಿಗಳು ಆಗ್ರಹಿಸಿದ್ದಾರೆ.