ಬೆಂಗಳೂರು: ಬಿಎಸ್ವೈ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಶಾಸಕ ಅರವಿಂದ ಬೆಲ್ಲದ್ ದೆಹಲಿಯಿಂದ ವಾಪಸಾಗುತ್ತಿದ್ದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಗೃಹ ಸಚಿವರ ಜೊತೆ ಕೆಲ ಕಾಲ ಮಾತುಕತೆ ನಡೆಸಿದ ಅರವಿಂದ ಬೆಲ್ಲದ್, ಚರ್ಚಿತ ವಿಷಯದ ಬಗೆಗಿನ ಗೌಪ್ಯತೆ ಬಿಟ್ಟುಕೊಡಲಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ, ದೆಹಲಿಗೆ ಹೋಗಿದ್ದೆ, ನಾಯಕರನ್ನು ಭೇಟಿ ಮಾಡಿದ್ದೇನೆ ಎಂದಷ್ಟೇ ಹೇಳಿ ದೆಹಲಿ ಭೇಟಿ ಬಗ್ಗೆಯೂ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದ್ದಾರೆ.
ನಾಯಕತ್ವ ಬದಲಾವಣೆ ವಿಷಯದ ಕುರಿತು ಮಾತನಾಡುವುದಿಲ್ಲ. ಆದರೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ರನ್ನು ಭೇಟಿ ಮಾಡುತ್ತೇನೆ, ಅರುಣ್ ಸಿಂಗ್ ಬೆಂಗಳೂರಿಗೆ ಬಂದ ನಂತರ ಅವರನ್ನು ಭೇಟಿ ಮಾಡುತ್ತೇನೆ ಎಂದು ಮಾಧ್ಯಮವದರಿಗೆ ಶಾಸಕ ಬೆಲ್ಲದ್ ತಿಳಿಸಿದ್ದಾರೆ.
ಸಚಿವರ ಸಭೆಯಲ್ಲಿ ಭಾಗಿ:
ಬುಧವಾರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಚಿವರ ಸಭೆ ಕರೆದಿದ್ದು, ಅದರಲ್ಲಿ ಭಾಗಿಯಾಗುತ್ತೇನೆ. ಈ ಸಭೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ, ಉಸ್ತುವಾರಿಯಾಗಿ ಸಭೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಬೊಮ್ಮಾಯಿ- ರೇವಣ್ಣ ಭೇಟಿ: ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು. ಕ್ಷೇತ್ರಕ್ಕೆ ಸಂಬಂಧಪಟ್ಟ ಕೆಲಸಗಳ ಕುರಿತು ಮಾತುಕತೆ ನಡೆಸಿದರು ಎನ್ನಲಾಗ್ತಿದೆ. ಆದರೆ ಇದನ್ನು ತಳ್ಳಿಹಾಕಿದ ರೇವಣ್ಣ, ಬೊಮ್ಮಾಯಿ ಹಳೆ ಸ್ನೇಹಿತರು, ನಮ್ಮ ಪಕ್ಷದಲ್ಲಿ ಇದ್ದವರು. ಹಾಗಾಗಿ ಸೌಹಾರ್ದಯುತ ಭೇಟಿಗೆ ಬಂದಿದ್ದೆ ಎಂದು ತಿಳಿಸಿದರು.