ಮಂಗಳೂರು: ಜಿಲ್ಲಾ ಕಾರಾಗೃಹದೊಳಗೆ ನಡೆದ ಮಾರಾಮಾರಿ ಪ್ರಕರಣದ ಕಾರಣ ಇನ್ನೂ ನಿಗೂಢವಾಗಿದ್ದು, ಗಾಯಗೊಂಡ ವಿಚಾರಣಾಧೀನ ಕೈದಿಗಳಾದ ಅನ್ಸಾರ್ ಹಾಗೂ ಜೈನುದ್ದೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿದ್ದು, ಹಲವಾರು ಪ್ರಕರಣಗಳ ಆರೋಪಿ ಸಮೀರ್ ಹಾಗೂ ಆತನ ಜೊತೆಗಿರುವ 20ಕ್ಕೂ ಅಧಿಕ ಮಂದಿ ಪಕ್ಕದ ಬ್ಯಾರಕ್ಗೆ ನುಗ್ಗಿ ಅಲ್ಲಿದ್ದ ಅನ್ಸಾರ್ ಹಾಗೂ ಜೈನುದ್ದೀನ್ಗೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಅದನ್ನು ತಡೆಯಲು ಹೋದ ಜೈಲು ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದಾರೆ. ಆ ಬಳಿಕ ಮತ್ತೆ ವಿಚಾರಣೆ ನಡೆಸಲು ಹೋದ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಲಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ಕು ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅಲ್ಲದೇ ಆರೋಪಿಗಳು ಜೈಲಿನೊಳಗಿದ್ದೇ ಚಮಚ, ಕ್ಯಾರಂ ಬೋರ್ಡ್ ತುಂಡನ್ನು ಚೂಪು ಮಾಡಿ ಶಸ್ತ್ರಾಸ್ತ್ರಗಳ ಮಾದರಿಯಲ್ಲಿ ತಯಾರು ಮಾಡಿದ್ದರು. ಅಲ್ಲದೇ ಟ್ಯೂಬ್ ಲೈಟ್ ಪುಡಿಗಳನ್ನು ಬಟ್ಟೆಗಳಲ್ಲಿ ಸುತ್ತಿ ಅದರಲ್ಲಿ ಹೊಡೆಯಲು ವ್ಯವಸ್ಥೆ ಮಾಡಿದ್ದರು. ಈ ರೀತಿಯಲ್ಲಿ ಲಭ್ಯವಿರುವ ವಸ್ತುಗಳಲ್ಲಿಯೇ ಮಾರಕ ವಸ್ತುಗಳನ್ನು ತಯಾರು ಮಾಡಿದ್ದರು.
ಸಮೀರ್ ಮೇಲೆ 10 ಕ್ಕೂ ಹೆಚ್ಚು ಪ್ರಕರಣಗಳಿವೆ. ಹಲ್ಲೆಗೊಳಗಾದ ಅನ್ಸಾರ್ ಹಾಗೂ ಜೈನುದ್ದೀನ್ ಮೇಲೂ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಕೃತ್ಯದಲ್ಲಿ ತೊಡಗಿರುವವರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದ್ದು, ಇನ್ನೂ ಹಲ್ಲೆ ಯಾಕೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.