ಚಿಕ್ಕಮಗಳೂರು: ಜಿಲ್ಲೆಯೆ ಮಲೆನಾಡು ಭಾಗದಲ್ಲಿ ಹಾಗೂ ಘಟ್ಟ ಪ್ರದೇಶದ ಭಾಗದಲ್ಲಿ ಇಂದೂ ಕೂಡ ಮಳೆಯ ಸಿಂಚನ ಮುಂದುವರೆದಿದೆ. ಮಳೆ ಒಂದು ಕಡೆ ಜೋರಾಗಿಯೂ ಸುರಿಯುತ್ತಿಲ್ಲ. ಇನ್ನೊಂದು ಕಡೆ ಬಿಡುವು ಸಹ ನೀಡುತ್ತಿಲ್ಲ. ಮಲೆನಾಡಿಗರು ಮನೆಯಿಂದ ಹೊರಬರಲು ಆಗುತ್ತಿಲ್ಲ.
ಮಳೆರಾಯನ ಕಣ್ಣಾಮುಚ್ಚಾಲೆ ಆಟಕ್ಕೆ ಮಲೆನಾಡಿಗರು ಬೆಳಗ್ಗಿನಿಂದಲೂ ಬೇಸತ್ತು ಹೋಗಿದ್ದಾರೆ. ಮುಂಜಾನೆಯಿಂದಲೇ ಆರಂಭವಾದ ಮಳೆ ನಿಧಾನವಾಗಿ ಎಡೆಬಿಡದೇ ಸುರಿಯುತ್ತಿದ್ದು, ಜನ ಹೈರಾಣಾಗಿದ್ದಾರೆ. ಜೋರಾಗಿ ಬಂದರೆ ಕೆರೆ-ಕಟ್ಟೆಗಳಿಗೆ ನೀರಾದರೂ ಆಗಿ ತುಂಬುತ್ತಿತ್ತು. ಆದರೆ ಜೋರಾಗಿಯೂ ಸುರಿಯದೇ ಜನರನ್ನು ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಿದಂತಿದೆ.
ಮಳೆರಾಯ ಬೆಳ್ಳಗ್ಗಿನಿಂದಲೂ ನಿರಂತರವಾಗಿ ಸುರಿಯುತ್ತಿದ್ದಾನೆ. ಚಿಕ್ಕಮಗಳೂರು ನಗರವೂ ಸೇರಿದಂತೆ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಕಳಸ, ಎನ್.ಆರ್.ಪುರದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆರಾಯನ ಆಟಕ್ಕೆ ಜನ ಬೆಸತ್ತು ಹೋಗುತ್ತಿದ್ದಾರೆ. ಕುದುರೆಮುಖ, ಕೆರೆಕಟ್ಟೆ ಹಾಗೂ ಘಟ್ಟ ಪ್ರದೇಶದಲ್ಲಿ ಎರಡು ದಿನಗಳಿಂದಲೂ ಮಳೆ ಸುರಿಯುತ್ತಿದ್ದು ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು ನಿರಂತರ ಮಳೆಯ ನರ್ತನ ಮುಂದುವರೆದಿದೆ.