ಬೆಂಗಳೂರು: ನಗರದ ಕೆಲವೆಡೆ ಸುರಿದ ಭಾರೀ ಗಾಳಿ ಸಹಿತ ಮಳೆಗೆ 83 ಮರಗಳು ಹಾಗೂ 89 ವಿದ್ಯುತ್ ಕಂಬಗಳು ಧರೆಗುರುಳಿವೆ. ಇಂದು ಕೂಡಾ ದಟ್ಟ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ. ಮೇಯರ್ ಗಂಗಾಂಬಿಕೆ ಅವರು ಗಿರಿನಗರದ ಅವಲಹಳ್ಳಿ ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿಕೊಟ್ಟು ಮರಗಳ ತೆರವು ಕಾರ್ಯಾಚರಣೆ ಪರಿಶೀಲನೆ ನಡೆಸಿದರು.
ನಿನ್ನೆ ತಡರಾತ್ರಿ ಸುರಿದ ಮಳೆಗೆ ಹಲವು ಮರಗಳು ಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲ, ವಿದ್ಯುತ್ ಸಂಪರ್ಕ ಇಲ್ಲದೆ ಜನ ಪರದಾಡುತ್ತಿದ್ದಾರೆ. ಮರಗಳನ್ನು ತೆರವು ಮಾಡಲು ಬೆಸ್ಕಾಂ ಪಾಲಿಕೆ ಅರಣ್ಯ ಘಟಕದ ಸಿಬ್ಬಂದಿ ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಿನ್ನೆ ರಾಜ್ಯದಲ್ಲಿ ಬೀಳಬೇಕಿದ್ದ ನಿರೀಕ್ಷಿತ ಮಳೆ 5.9 ಮಿಲಿ ಮೀಟರ್. ಆದರೆ, 4.7 ಮಿ.ಮೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಆಗಬೇಕಿದ್ದ ನಿರೀಕ್ಷಿತ ಮಳೆ 4.3 ಮಿ.ಮೀ, ಆದರೆ, 5.8 ಮಿ.ಮೀ ಮಳೆಯಾಗಿದೆ. ನಿನ್ನೆಆರ್‌ಆರ್‌ನಗರವೊಂದರಲ್ಲೇ 25 ಮರಗಳು ಧರೆಗುರುಳಿದ್ದು, ಅಶೋಕನಗರ, ಗಿರಿನಗರ, ಬನಶಂಕರಿ, ಹನುಮಂತನಗರ, ಬಸವನಗುಡಿ, ಡಬಲ್‌ರೋಡ್‌ನಲ್ಲಿಯೂ ಮರಗಳು ಬಿದ್ದಿವೆ. ಮರಗಳು ಲೈಟ್ ಕಂಬಗಳ ಮೇಲೆ ಬಿದ್ದು ಹಲವೆಡೆ ಪವರ್ ಕಟ್ ಆಗಿದೆ.
ನೆಲಮಂಗಲ : ಇಲ್ಲಿನ ಸುತ್ತಮುತ್ತ ಬಿರುಗಾಳಿ ಸಹಿತ ಭಾರೀ ಮಳೆಗೆ ಇಲ್ಲಿನ ಸರ್ಕಾರಿ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ. ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಹಲವು ಕಡೇ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ.
ನೆಲಮಂಗಲ ತಾಲೂಕಿನ ತಿಮ್ಮಸಂದ್ರ, ಚಿಕ್ಕಮಾರನಹಳ್ಳಿ, ಬೇಗೂರು ಸೇರಿದಂತೆ ವಿವಿಧೆಡೆ ವರುಣನ ಆರ್ಭಟ ಜೋರಾಗಿತ್ತು.