ಲಂಡನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ಗಳಲ್ಲಿ ಮಹತ್ವದ ಹೊಣೆಗಾರಿಕೆ ನಿಭಾಯಿಸಿ ಶಹಬ್ಬಾಸ್ ಗಿರಿ ಪಡೆದುಕೊಂಡ ಭಾರತೀಯ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್, ಭಾರತ ಹಾಗೂ ವಿಶ್ವ ಅರ್ಥವ್ಯವಸ್ಥೆಗೆ ಸಂಬಂಧಿಸಿದ ಕಟು ವಾಸ್ತವಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದರು. ಇದೀಗ ಇದೇ ರಘುರಾಮ್ ರಾಜನ್ ಇಂಗ್ಲೆಂಡ್‌ನ ಅತ್ಯಂತ ಪುರಾತನ ಕೇಂದ್ರ ಬ್ಯಾಂಕ್‌ನ ಗವರ್ನರ್ ಹುದ್ದೆಯ ರೇಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ವಿಶೇಷ ಅಂದ್ರೆ, ಈಗ ಗವರ್ನರ್ ಆಗಿರುವ ಮಾರ್ಕ್ ಕಾರ್ನಿ ಸ್ಥಾನಕ್ಕೆ ಕೇಳಿ ಬರುತ್ತಿರುವ ಹೆಸರುಗಳಲ್ಲಿ ರಘುರಾಮ್ ರಾಜನ್ ಮಾತ್ರ ವಿದೇಶಿ ಪ್ರಜೆ. ಇಂಗ್ಲೆಂಡ್‌ನ ಹಣಕಾಸು ನೀತಿ, ದೇಶದ ಅರ್ಥವ್ಯವಸ್ಥೆ ಸ್ಥಿರತೆಯ ವಿಚಾರವಾಗಿ ಆ ದೇಶದಲ್ಲಿ ರಾಜಕೀಯ ಹಸ್ತಕ್ಷೇಪ ಅತ್ಯಂತ ಕಡಿಮೆ. ಬ್ರೆಕ್ಸಿಟ್ ಬಳಿಕ ಕಳೆಗುಂದಿದ ದೇಶಿಯ ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡಲು ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಟ್ರೆಸರಿ ಇದೀಗ ವಿದೇಶಿ ಪ್ರತಿಭಾನ್ವಿತ ಅರ್ಥಶಾಸ್ತ್ರಜ್ಞರ ಹುಡುಕಾಟದಲ್ಲಿದೆ.
ಬ್ಯಾಂಕಿನ ಹಾಲಿ ಗವರ್ನರ್ ಮಾರ್ಕ್ ಕಾರ್ನಿ, ದೇಶದ ಅರ್ಥವ್ಯವಸ್ಥೆಯ ಸಂಕಟಗಳನ್ನು ವೈಭವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ. ಜೊತೆಗೆ ಯುರೋಪಿಯನ್ ಯೂನಿಯನ್‌ನಿಂದ ಹೊರಬರುವ (ಬ್ರೆಕ್ಸಿಟ್) ನಿರ್ಧಾರದಿಂದ ದೇಶದ ಅರ್ಥವ್ಯವಸ್ಥೆಗೆ ಆಗುತ್ತಿರುವ ಅನುಕೂಲಗಳನ್ನು ಪರಿಗಣಿಸದೇ ಇರುವುದರ ಬಗ್ಗೆಯೂ ಅಸಮಾಧಾನ ಎದ್ದಿತ್ತು. ಬ್ರೆಕ್ಸಿಟ್ ವಿಚಾರವಾಗಿ ಉಂಟಾದ ಅಸಮಾಧಾನದ ಹಿನ್ನೆಲೆಯಲ್ಲೇ ದೇಶದ ಪ್ರಧಾನಿ ತೆರೇಸಾ ಮೇ ಕೂಡಾ ರಾಜೀನಾಮೆ ಸಲ್ಲಿಸಿದ್ದು, ಇದೀಗ ದೇಶದ ಹಣಕಾಸು ನೀತಿ ಹಾಗೂ ಅರ್ಥವ್ಯವಸ್ಥೆಯ ಮಹತ್ವದ ಹೊಣೆ ನಿಭಾಯಿಸಬೇಕಿರುವ ಅತ್ಯಂತ ಉನ್ನತ ಹುದ್ದೆಗೆ ಹೊಸ ನಾಯಕನನ್ನು ಹುಡುಕಲಾಗುತ್ತಿದೆ.
ಬ್ರೆಕ್ಸಿಟ್ ಬಗ್ಗೆ ರಾಜನ್ ನಿಲುವು ಏನು?
ಬ್ರೆಕ್ಸಿಟ್ ವಿಚಾರವಾಗಿ ಇಂಗ್ಲೆಂಡ್ ಪರಿಸ್ಥಿತಿ ಬಗ್ಗೆ ರಾಜನ್ ಕಳಕಳಿ ವ್ಯಕ್ತಪಡಿಸಿದ್ದರು. ಟೈಮ್ಸ್ ಸುದ್ದಿ ಪತ್ರಿಕೆಗೆ ಅವರು ನೀಡಿದ ಸಂದರ್ಶನವೊಂದರಲ್ಲಿ, ಇಂಗ್ಲೆಂಡ್ ಜಗತ್ತಿನ ಜೊತೆ ಹೇಗೆ ಹೊಂದಿಕೊಳ್ಳುತ್ತದೆ ಅನ್ನೋದ್ರ ಮೇಲೆ ಅದರ ಭವಿಷ್ಯ ಅಡಗಿದೆ ಎಂದು ಸೂಚ್ಯವಾಗಿ ಹೇಳಿಕೆ ನೀಡಿದ್ದರು.
ಬ್ರಿಟೀಷರ ನಾಡಿನ ಅರ್ಥವ್ಯವಸ್ಥೆಯ ಹೊಣೆ ನಿಭಾಯಿಸುವ ಅತ್ಯಂತ ದೊಡ್ಡ ಹುದ್ದೆಗೆ ಇಂಗ್ಲೆಂಡಿನ ಹಿರಿಯ ಅರ್ಥಶಾಸ್ತ್ರ ಪ್ರೊಫೆಸರ್ ಡೇವಿಡ್ ಬ್ಲಾಂಕ್ ಫ್ಲವರ್, ಆ್ಯಂಡ್ರೀವ್ ಬೇಲಿ ರೇಸ್‌ನಲ್ಲಿ ಇದ್ದಾರೆ.
ಪ್ರತಿಕ್ರಿಯೆಗೆ ರಾಜನ್ ನಕಾರ: 56 ವರ್ಷದ ರಾಜನ್, ಚಿಕಾಗೋ ಬಿಸ್ನೆಸ್ ಸ್ಕೂಲ್‌ನಲ್ಲಿ ಫ್ರೊಫೆಸರ್ ಆಗಿ ಕೆಲ್ಸ ಮಾಡುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಅರ್ಥನೀತಿಯ ಚಾಣಕ್ಯ ರಘುರಾಮ್ ರಾಜನ್
ರಾಜನ್ 2003-06 ರವರೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಬಳಿಕ ಭಾರತದ ಕೇಂದ್ರ ಸರ್ಕಾರಕ್ಕೆ ಆರ್ಥಿಕ ಸಲಹೆಗಾರರಾಗಿದ್ದ ಅವರು ರಿಸರ್ವ್ ಬ್ಯಾಂಕ್ ಗೆ ಗವರ್ನರ್ ಕೂಡಾ ಆಗಿದ್ದರು. ಜಾಗತಿಕ ಅರ್ಥವ್ಯವಸ್ಥೆಯ ವಿದ್ಯಮಾನಗಳು ಹಾಗು ಆಗುಹೋಗುಗಳನ್ನು ನಿಖರವಾಗಿ ಊಹಿಸಿಬಲ್ಲ ಜಾಣ್ಮೆ ರಘುರಾಮ್ ರಾಜನ್ ಅವರಿಗಿದೆ.