ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2020- 21ನೇ ಸಾಲಿನಲ್ಲಿ ವಿಧಿಸಿರುವ ಖರೀದಿ ದರವನ್ನು ಅತ್ಯಂತ ಕಡಿಮೆ ಎಂಬ ಮಾತು ಕೇಳಿ ಬರುತ್ತಿದೆ.
ಸರ್ಕಾರದ ಪರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಮಾತು ಕೇಳಿ ಬರುತ್ತಿದೆ.
ರಾಜ್ಯ ಸರ್ಕಾರ 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಭತ್ತದ ತಳಿಗಳಿಗೆ ಇದರ ವಿಧಿಸಿದ್ದು, ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1,868 ರೂ. ನಿಗದಿಪಡಿಸಿದ್ದರೆ, ಗ್ರೇಟ್ ಹಕ್ಕಿಗೆ 1,888 ರೂ. ನಿಗದಿಪಡಿಸಲಾಗಿದೆ.
ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೇಳಿರುವ ಮಾಹಿತಿಗೆ ಈ ವಿವರವನ್ನು ಸಚಿವರು ನೀಡಿದ್ದು, ಪ್ರಸ್ತುತ 12.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಲು ಆದೇಶಿಸಲಾಗಿದೆ.
ಈ ಪ್ರಮಾಣವನ್ನು 18.01 ಲಕ್ಷ ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. 2021 ರ ಮಾರ್ಚ್ 6 ಕ್ಕೆ ಇದ್ದಂತೆ 1,59,854.917 ಮೆಟ್ರಿಕ್ ಟನ್ ಬತ್ತವನ್ನು ರೈತರಿಂದ ಖರೀದಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದಲ್ಲದೆ ಭತ್ತ ಖರೀದಿಸಿದ ಎರಡು ಸಂಗ್ರಹಣಾ ಏಜೆನ್ಸಿಗಳಾದ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗಳಿಂದ ರೈತರಿಗೆ ಒಟ್ಟು 162.57 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ.
ಅಲ್ಲದೆ 2018-19ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಸಂಬಂಧಿಸಿದಂತೆ ಡ್ರೈಯೇಜ್ ಶುಲ್ಕ ಪಾವತಿಸುವುದನ್ನು ಹೊರತುಪಡಿಸಿ ಉಳಿದ ಪೂರ್ಣ ಮೊತ್ತವನ್ನು ಅಕ್ಕಿ ಗಿರಣಿ ಮಾಲೀಕರಿಗೆ ಪಾವತಿಸಲಾಗಿದೆ.
2019-20ನೇ ಸಾಲಿನಲ್ಲಿ ಬತ್ತದ ಹಲ್ಲಿಂಗ್ ಗೆ ಸಂಬಂಧಿಸಿದಂತೆ ಈಗಾಗಲೇ ಅಕ್ಕಿ ಗಿರಣಿ ಮಾಲೀಕರಿಗೆ ಹಣವನ್ನು ಪಾವತಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಒಟ್ಟು 5,93,16,550 ರೂ. ಮೊತ್ತ ಬಿಡುಗಡೆಗೆ ಬಾಕಿ ಇದೆ ಎಂದು ವಿವರಿಸಿದ್ದಾರೆ.ಪ್ರತಿ ಕ್ವಿಂಟಲ್ ಬತ್ತವನ್ನು ಹಲ್ಲಿಂಗ್ ಮಾಡಲು 10 ರೂ. ಮೊತ್ತವನ್ನು ವೆಚ್ಚವಾಗಿ ನೀಡಲಾಗುತ್ತದೆ.
ಕೇಂದ್ರ ಸರ್ಕಾರವೇ ಇದರ ಬೆಲೆ ನಿಗದಿ ಪಡಿಸುತ್ತದೆ. 2010-11ನೇ ಸಾಲಿನಿಂದ ಇದುವರೆಗೂ ಯಾವುದೇ ಪರಿಷ್ಕರಣೆ ವೆಚ್ಚದಲ್ಲಿ ಆಗಿಲ್ಲ ಎಂಬ ಮಾಹಿತಿಯನ್ನು ಸಹ ಸಚಿವ ಉಮೇಶ್ ಕತ್ತಿ ನೀಡಿದ್ದಾರೆ.