ತುಮಕೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಏರಿಕೆ ಆಗುತ್ತಿರುವುದಕ್ಕೆ ಕಡಿವಾಣ ಹಾಕಲು ಸರ್ಕಾರ ಜಿಲ್ಲಾಡಳಿತ ವತಿಯಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ.
ವಿವಿಧ ಸಮುದಾಯಗಳು, ಸಂಘಟನೆಗಳು ಸಹ ಕೋವಿಡ್ ಕೇರ್ ಸೆಂಟರ್ಗಳನ್ನು ಆರಂಭಿಸುವ ಮೂಲಕ ಜಿಲ್ಲಾಡಳಿತದ ನೆರವಿಗೆ ಬಂದಿವೆ.
ಈಗಾಗಲೇ ತುಮಕೂರು ನಗರದಲ್ಲಿ ಮೂರು ಕಡೆ ಖಾಸಗಿಯಾಗಿ ಇಂತಹ ಕೇಂದ್ರಗಳನ್ನು ತೆರೆಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರು ನಗರದ ಶ್ರೀ ಸಿದ್ದಗಂಗಾ ಮಠ, ಮುಸ್ಲಿಂ ಸಮುದಾಯದ ಸಂಘಟಕರು ಹಾಗೂ ರೇಣುಕಾ ವಿದ್ಯಾಪೀಠದ ವತಿಯಿಂದ ಒಟ್ಟು ಮೂರು ಕಡೆಗೆ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲಾಗಿದೆ.
ಸಿದ್ದಗಂಗಾಮಠದಲ್ಲಿನ ಯಾತ್ರಿ ನಿವಾಸವನ್ನು 80 ಹಾಸಿಗೆಗಳ ಕೋವಿಡ್ ಕೇರ್ ಆರಂಭಿಸಲಾಗಿದೆ. ಪ್ರಾರಂಭಿಕ ಹಂತದ ಸೋಂಕಿತರಿಗೆ ಹಾಗೂ ಹೋಮ್ ಐಸೋಲೇಸ್‌ನಲ್ಲಿ ಇರಲು ಸಾಧ್ಯವಾಗದ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರಿನ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವಂತಹ ಪ್ರದೇಶದಲ್ಲಿ ಇಕ್ಬಾಲ್ ಅಹಮದ್ ಅವರ ನೇತೃತ್ವದಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ಗಳನ್ನು ಆರಂಭಿಸಲಾಗಿದೆ.
ಇಲ್ಲಿ ಮುಖ್ಯವಾಗಿ ಸೋಂಕಿನ ಪ್ರಾರಂಭಿಕ ಹಂತದಲ್ಲಿ ಇರುವ ರೋಗಿಗಳಿಗೆ ಕೌನ್ಸೆಲಿಂಗ್ ಹಾಗೂ ಪೂರಕ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯು ಘಟಕ ಇಲ್ಲದಿದ್ದರೂ ತಕ್ಷಣಕ್ಕೆ ಆಕ್ಸಿಜನ್ ಅವಶ್ಯಕತೆ ಇರುವ ಸೋಂಕಿತರಿಗೆ ಪೂರಕ ವ್ಯವಸ್ಥೆ ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತದೆ.
ಕಳೆದ ವರ್ಷ ಫೀವರ್ ಕ್ಲಿನಿಕ್ ಎಂಬುದಾಗಿ ಆರಂಭಿಸಿದ್ದ ಇಕ್ಬಾಲ್ ಅಹಮದ್ ಈ ಬಾರಿ ಹೆಚ್ಚಿನ ವೈದ್ಯಕೀಯ ಪರಿಕರಗಳೊಂದಿಗೆ ಕೋವಿಡ್ ಕೇಂದ್ರವನ್ನು ಆರಂಭಿಸಿದ್ದಾರೆ.
ಮೊದಲಿಗೆ ಕನಿಷ್ಟ ಸಂಖ್ಯೆಯಲ್ಲಿ ಸೋಂಕಿತರು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇದೀಗ ನೂರಕ್ಕೂ ಹೆಚ್ಚು ಮಂದಿ ದಿನನಿತ್ಯ ಚಿಕಿತ್ಸೆ ಪಡೆಯಲು ಮುಂದೆ ಬರುತ್ತಿದ್ದಾರೆ.
ತುಮಕೂರಿನ ರೇಣುಕಾ ವಿದ್ಯಾಪೀಠದ ವತಿಯಿಂದ 50 ಹಾಸಿಗೆಗಳ ಕೋವಿಡ್ ಕೇರ್‌ನ ತೆರೆಯಲಾಗಿದೆ. ಜಿಲ್ಲಾಸ್ಪತ್ರೆಯಿಂದ ಶಿಫಾರಸುಗೊಳ್ಳುವ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.