ಭೋಪಾಲ್ : ಇಲ್ಲಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಮೇಲೆ ಚುನಾವಣಾ ಆಯೋಗ ಮೂರು ದಿನಗಳ ನಿಷೇಧ ಹೇರಿ ಆದೇಶ ಹೊರಡಿಸಿದೆ. ಹೀಗಾಗಿ ಮುಂದಿನ 72 ಗಂಟೆಗಳ ಕಾಲ ಯಾವುದೇ ಚುನಾವಣಾ ರ್ಯಾಲಿಯಲ್ಲಿ ಅವರು ಭಾಗಿಯಾಗುವಂತಿಲ್ಲ.
ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ 26/11 ಮುಂಬೈ ದಾಳಿ ವೇಳೆ ಜೀವ ಕಳೆದುಕೊಂಡಿದ್ದು ತಮ್ಮ ಶಾಪದಿಂದ ಎಂದು ಹೇಳಿದ್ದ ಸಾಧ್ವಿ, ಬಾಬ್ರಿ ಮಸೀದಿ ಕೆಡವಿದ್ದಕ್ಕೆ ಬೇಸರವೇಕೆ ಮಾಡಿಕೊಳ್ಳಬೇಕು? ನನಗೆ ಆ ಬಗ್ಗೆ ಹೆಮ್ಮೆ ಇದೆ. ಬೇಡದ ವಸ್ತುಗಳನ್ನ ಕೆಡಿವಿ ಅದೇ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದರು.
ತಮ್ಮ ಹೇಳಿಕೆ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಸಾಧ್ವಿ ಕ್ಷಮೆಯಾಚನೆ ಮಾಡಿದ್ದರು. ಆದರೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರಿಗೆ ನೋಟಿಸ್ ಕೂಡ ಜಾರಿಯಾಗಿದ್ದವು. ಇದೀಗ ಅವರ ಚುನಾವಣಾ ಪ್ರಚಾರದ ಮೇಲೆ ಬ್ಯಾನ್ ಹಾಕಲಾಗಿದೆ. ಮಧ್ಯಪ್ರದೇಶ ಭೋಪಾಲ್ನಿಂದ ಸ್ಪರ್ಧೆ ಮಾಡಿರುವ ಪ್ರಜ್ಞಾ ಸಿಂಗ್, ಕಾಂಗ್ರೆಸ್ನ ದಿಗ್ವಿಜಯ್ ಸಿಂಗ್ ವಿರುದ್ಧ ಫೈಟ್ ನಡೆಸುತ್ತಿದ್ದಾರೆ.
ತಮ್ಮ ಮೇಲಿನ ಬ್ಯಾನ್ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಜ್ಞಾ, ಯಾವುದೇ ತೊಂದರೆ ಇಲ್ಲ. ಈಗಾಗಲೇ ಇಂತಹ ಅನೇಕ ಬ್ಯಾನ್ಗಳು ನನ್ನ ಮೇಲೆ ಆಗಿವೆ ಎಂದು ಹೇಳಿಕೊಂಡಿದ್ದಾರೆ.