ಬೆಂಗಳೂರು : ಕೊರೊನಾ ಸೋಂಕು ಸರಪಳಿ ಮುರಿಯಲು ವಿಧಿಸಲಾಗಿದ್ದ ವೀಕೆಂಡ್ ಕರ್ಫ್ಯೂಗೆ ರಾಜಧಾನಿ ಸ್ತಬ್ಧವಾಗಿದೆ. ಈ ನಡುವೆ ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.
ಮೆಡಿಕಲ್ ಎಮರ್ಜೆನ್ಸಿ ಹೊರತುಪಡಿಸಿದರೆ ಅನಗತ್ಯವಾಗಿ ಓಡಾಡಬೇಡಿ ಎಂದು ತಿಳುವಳಿಕೆ ಮೂಡಿಸಿದರೂ ನಗರದ ಹಲವೆಡೆ ವಾಹನಗಳು ಸಂಚಾರ ನಡೆಸಿದವು.
ಫ್ಲೈ ಓವರ್‌ಗಳನ್ನು ಬಂದ್ ಮಾಡಿ ಮುಖ್ಯ ರಸ್ತೆಗಳನ್ನು ಏಕಮುಖ ರಸ್ತೆಗಳನ್ನಾಗಿ ಪರಿವರ್ತಿಸಿ ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನ ತಪಾಸಣೆ ನಡೆಸಿದರು.
ಸಂಬಂಧಿಕರಿಗೆ ಅನಾರೋಗ್ಯ, ದಿನಸಿ ಪದಾರ್ಥ ಖರೀದಿ, ಹೀಗೆ ಕುಂಟು ನೆಪ ಹೇಳಿ ಪೊಲೀಸರಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರು. ಹಲವು ಕಡೆಗಳಲ್ಲಿ ಪೊಲೀಸರೊಂದಿಗೆ ವಾಹನ ಸವಾರರು ಮಾತಿನ ಚಕಮಕಿ ನಡೆಸಿದರು. ಅನಗತ್ಯವಾಗಿ ಸಂಚಾರ ನಡೆಸುತ್ತಿರುವುದು ಖಾತ್ರಿ ಪಡಿಸಿಕೊಂಡ ಅಂತಹವರ ವಾಹನಗಳನ್ನು ಜಪ್ತಿ ಮಾಡಿದರು.
886 ವಾಹನಗಳು ಜಪ್ತಿ : ವಾರಂತ್ಯ ಕರ್ಫ್ಯೂ ಅರಿತಿದ್ದರೂ ಅನಗತ್ಯವಾಗಿ ತಿರುಗಾಡುತ್ತಿರುವುದು ಕಂಡು ಬಂದ ಹಿನ್ನೆಲೆ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು.
ನಿನ್ನೆ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೈಕ್, ಕಾರು ಸೇರಿದಂತೆ 1265 ಜಪ್ತಿ ಮಾಡಿದ್ದ ಪೊಲೀಸರು ಇಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ನಾಲ್ಕು ಚಕ್ರದ ವಾಹನಗಳು 25, ತ್ರಿಚಕ್ರ ವಾಹನ 20, 841 ದ್ವಿಚಕ್ರ ಸೇರಿದಂತೆ ಒಟ್ಟ 886 ವಾಹನಗಳನ್ನು ಸೀಜ್ ಮಾಡಿದ್ದಾರೆ.
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್ ಡಿಎಂಎ ಕಾಯ್ದೆಯಡಿ 16 ಎಫ್ಐಆರ್ ದಾಖಲಾಗಿವೆ ಎಂದು ಹಿರಿಯ ಪೊಲೀಸರು ಮಾಹಿತಿ ನೀಡಿದ್ದಾರೆ.