ನವದೆಹಲಿ: 2014ರಲ್ಲಿ ಕೇಂದ್ರದ ಚುಕ್ಕಾಣಿ ಹಿಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಯಾವುದೇ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಏಪ್ರಿಲ್ 26ರಂದು ಮೊದಲ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 26ರಂದು ತಮ್ಮ ಸಂಸದೀಯ ಕ್ಷೇತ್ರ ಉತ್ತರಪ್ರದೇಶದ ವಾರಣಾಸಿಯಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅದಕ್ಕೂ ಮುಂಚಿತವಾಗಿ ಮಧ್ಯಾಹ್ನ 12.30ರ ವೇಳೆ ಹೋಟೆಲ್ ತಾಜ್ ಗಂಗಾದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಕಳೆದ ಐದು ವರ್ಷದಲ್ಲಿ ಪ್ರಧಾನಿ ಮೋದಿ ನಡೆಸುತ್ತಿರುವ ಮೊದಲ ಸುದ್ದಿಗೋಷ್ಠಿ ಇದಾಗಿರುವ ಕಾರಣ, ಎಲ್ಲ ರೀತಿಯಿಂದಲೂ ಮಹತ್ವ ಪಡೆದುಕೊಂಡಿದೆ.
ಈಗಾಗಲೇ ಅನೇಕ ಮಾಧ್ಯಮಗಳಿಗೆ ಮೋದಿ ಸಂದರ್ಶನ ನೀಡಿದ್ದಾರೆ. ಆದರೆ ಎಲ್ಲ ಮಾಧ್ಯಮಗಳ ಮುಂದೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿರಲಿಲ್ಲ. ಇದೇ ವಿಷಯಕ್ಕಾಗಿ ಈಗಾಗಲೇ ವಿಪಕ್ಷಗಳು ಅವರ ಮೇಲೆ ವಾಗ್ದಾಳಿ ಕೂಡ ನಡೆಸಿದ್ದವು. ಆದರೆ ಆಶ್ಚರ್ಯಕರ ರೀತಿಯಲ್ಲಿ ಮೋದಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಏಪ್ರಿಲ್ 26ರಂದು ವಾರಣಾಸಿ ಸಂಸದೀಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಿರುವ ಮೋದಿ. ಅದಕ್ಕೂ ಮುನ್ನಾದಿನ ಬೃಹತ್ ರೋಡ್ ಶೋನಲ್ಲಿ ಭಾಗಿಯಾಗಲಿದ್ದು, ಏಪ್ರಿಲ್ 26ರಂದು ಪಕ್ಷದ ಮುಖ್ಯಸ್ಥ ಅಮಿತ್ ಶಾ, ಜೆಪಿ ನಡ್ಡಾ, ಲಕ್ಷ್ಮಣ್ ಆಚಾರ್ಯ, ಸುನೀಲ್ ಓಜಾ ಹಾಗೂ ಅಶುತೋಷ್ ಜತೆ ಮಹತ್ವದ ಮೀಟಿಂಗ್ ಕೂಡ ನಡೆಸಲಿದ್ದಾರೆ.