ನವದೆಹಲಿ: ಒಡಿಶಾಕ್ಕೆ ಬಂದಪ್ಪಳಿಸಿರುವ ಫಣಿ ಚಂಡಮಾರುತ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಈಗಾಗಲೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. 200ಕಿ.ಮೀ ರಭಸದಲ್ಲಿ ಗಾಳಿ ಬೀಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ ಕೇಂದ್ರ ಸರ್ಕಾರ 1,000 ಕೋಟಿ ರೂ ಪರಿಹಾರ ಬಿಡುಗಡೆ ಮಾಡಿದೆ.
ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಒಡಿಶಾ, ಪಶ್ಚಿಮ ಬಂಗಾಳ,ಆಂಧ್ರಪ್ರದೇಶ,ತಮಿಳುನಾಡು ಹಾಗೂ ಪುದುಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸಾವಿರ ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಎನ್ಡಿಆರ್ಎಫ್,ಇಂಡಿಯನ್ ಕೋಸ್ಟ್ ಗಾರ್ಡ್, ಭೂಸೇನೆ, ವಾಯುಪಡೆ ಒಡಿಶಾದಲ್ಲಿ ಕಾರ್ಯಾಚರಣೆ ಶುರು ಮಾಡಿವೆ.
ಒಡಿಶಾ ಸರ್ಕಾರ ಕೂಡ ಯಾವುದೇ ರೀತಿಯ ಹೆಚ್ಚಿನ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತಿದ್ದು, ಸಕಲ ಕ್ರಮ ಕೈಗೊಂಡಿದೆ.