ಬಂಡಾ(ಯುಪಿ): ನಾಯಿಗೆ ಇರೋ ನಿಯತ್ತು ಮನುಷ್ಯರಿಗಿರಲ್ಲ ಅನ್ನಿಸುತ್ತೆ. ಸಾಕಿದ ಮಾಲೀಕನ ಮಾತನ್ನು ಕೇಳುವ, ಆಜ್ಞೆಯನ್ನು ಪಾಲಿಸುವ ನಿಯತ್ತಿನ ಪ್ರಾಣಿ ನಾಯಿ. ಸಾಕಿರುವ ಮಾಲೀಕನಿಗಾಗಿ ಏನ್ ಬೇಕಾದ್ರು ಮಾಡುತ್ತೆ ಎಂಬುದು ಈಗಾಗಲೇ ಅನೇಕ ಸಲ ಸಾಬೀತಾಗಿದೆ.
ಇದೀಗ ಉತ್ತರಪ್ರದೇಶದ ಬಂಡಾದಲ್ಲಿ ಅಂತಹದೊಂದು ಘಟನೆ ನಡೆದಿದೆ. ಬಿಲ್ಡಿಂಗ್ವೊಂದರಲ್ಲಿ ವಾಸವಾಗಿದ್ದ 30 ಜನರ ಪ್ರಾಣ ಕಾಪಾಡಿ ಕೊನೆಗೆ ಮೂಕ ನಾಯಿ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಘಟನೆ ಹಿನ್ನೆಲೆ
ಉತ್ತರಪ್ರದೇಶದ ಬಂಡಾ ಜಿಲ್ಲೆಯ ಕಾಲೋನಿಯೊಂದರಲ್ಲಿ ಬಹುಮಹಡಿ ಕಟ್ಟಡದಲ್ಲಿ ನಿನ್ನೆ ರಾತ್ರಿ ಸಿಲಿಂಡರ್ ಸ್ಫೋಟಗೊಂಡು ಏಕಾಏಕಿ ಬೆಂಕಿ ತಗುಲಿದೆ. ಈ ವೇಳೆ ಅಲ್ಲೇ ಇದ್ದ ಮಾಲೀಕನ ಸಾಕು ನಾಯಿ ಜೋರಾಗಿ ಬೊಗಳಿ ಎಲ್ಲರನ್ನೂ ಎಬ್ಬಿಸಿದೆ. ಬೆಂಕಿ ಕಂಡ ಜನರು ತಕ್ಷಣ ಅಲ್ಲಿಂದ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಜನರೆಲ್ಲರೂ ಬೇರೆಡೆ ಸ್ಥಳಾಂತರಗೊಳ್ಳುವವರೆಗೆ ಅಲ್ಲೇ ಇದ್ದ ನಾಯಿ, ತದನಂತರ ಸ್ಥಳದಲ್ಲೇ ಸಾವಪ್ಪಿದೆ. ಸಿಲಿಂಡರ್ ಸ್ಫೋಟದಿಂದಾಗಿ ನಾಲ್ಕು ಅಂತಸ್ತಿನ ಬಿಲ್ಡಿಂಗ್ ಸಂಪೂರ್ಣವಾಗಿ ಧ್ವಂಸಗೊಂಡಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಕಟ್ಟದಲ್ಲಿ ಮೊದಲ ಅಂತಸ್ತಿನಲ್ಲಿ ಪೀಠೋಪಕರಣಗಳ ಕಾರ್ಖಾನೆ, ಎರಡನೇ ಅಂತಸ್ತಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿ ಹಾಗೂ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಜನವಸತಿ ಮನೆಗಳಿದ್ದವು. ಇನ್ನು ಘಟನೆಯ ಬಗ್ಗೆ ಬಿಲ್ಡಿಂಗ್ನಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಹೇಳಿಕೆ ನೀಡಿದ್ದು, ನಾಯಿ ಬೊಗಳಲು ಆರಂಭಿಸುತ್ತಿದ್ದಂತೆ ತಾವು ಎಚ್ಚರಗೊಂಡು ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾಗಿ ಹೇಳಿದ್ದಾರೆ.
ಇನ್ನು ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಆರಿಸಿದ್ದು, ಮನೆ ಮಾಲೀಕನ ವಿರುದ್ಧ ದೂರು ದಾಖಲಾಗಿರುವುದಾಗಿ ತಿಳಿದು ಬಂದಿದೆ. ಈತ ಮೊದಲ ಮಹಡಿಯಲ್ಲಿ ಅನಧಿಕೃತವಾಗಿ ಪೀಠೋಪಕರಣ ಕಾರ್ಖಾನೆ ನಡೆಸುತ್ತಿರುವುದೇ ಈ ಘಟನೆ ನಡೆಯಲು ಕಾರಣ ಎನ್ನಲಾಗಿದೆ.