ಕೊಪ್ಪಳ: ಜಿಲ್ಲೆಯಲ್ಲಿ ಈಗ ಕೇವಲ ಒಬ್ಬರೇ ಚಿಕ್ಕ ಮಕ್ಕಳ ತಜ್ಞರಿದ್ದು, ಇನ್ನೂ 11 ತಜ್ಞರ ಅವಶ್ಯಕತೆಯಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು, ಸರ್ಕಾರ ಈಗಾಗಲೇ ವಿವಿಧ ವಿಭಾಗದ 47 ವೈದ್ಯರನ್ನು ಜಿಲ್ಲೆಗೆ ನೇಮಕ ಮಾಡಿದೆ ಎಂದಿದ್ದಾರೆ.
ಪ್ರಸ್ತುತ ಕೊರೊನಾ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ. ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ನಾವು ವೈಜ್ಞಾನಿಕವಾಗಿ ಕಾರಣ ಹೇಳಲು ಆಗುವುದಿಲ್ಲ. ಆದರೆ ಸಾಧ್ಯತೆಯ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲೆಗೆ 12 ಚಿಕ್ಕ ಮಕ್ಕಳ ತಜ್ಞರ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಸದ್ಯ ಕೇವಲ ಒಬ್ಬರು ಮಕ್ಕಳ ತಜ್ಞರಿದ್ದಾರೆ. ಚಿಕ್ಕ ಮಕ್ಕಳ ತಜ್ಞರ 11 ಹುದ್ದೆಗಳು ಖಾಲಿ ಇವೆ. ಸರ್ಕಾರ ಈ ಕೊರತೆಯನ್ನು ನೀಗಿಸುತ್ತದೆ. ಗಂಗಾವತಿಗೆ ಹೊಸದಾಗಿ ಚಿಕ್ಕ ಮಕ್ಕಳ ತಜ್ಞರನ್ನು ನೀಡಿದ್ದಾರೆ. ಇನ್ನುಳಿದಂತೆ ಯಲಬುರ್ಗಾ, ಕುಷ್ಟಗಿಗೂ ಕೊಡಬಹುದು. ಮೂರನೇ ಅಲೆ ಬರುತ್ತೋ ಇಲ್ಲವೋ ಎನ್ನುವುದಕ್ಕೆ ವೈಜ್ಞಾನಿಕ ಕಾರಣ ಕೊಡಲು ಆಗುವುದಿಲ್ಲ. ಮೂರನೇ ಅಲೆ ಅಮೆರಿಕ ಸೇರಿ ವಿದೇಶಗಳಲ್ಲಿ ಕಂಡು ಬಂದಿದೆ. ವಿದೇಶದಲ್ಲಿನ ಅಲೆ ನೋಡಿಕೊಂಡು ನಾವು ಸಿದ್ಧತೆ ಮಾಡುತ್ತಿದ್ದೇವೆ. ಮೂರನೇ ಅಲೆ ಮಕ್ಕಳನ್ನು ಬಾಧಿಸಬಹುದು ಎಂದು ತಜ್ಞರ ವರದಿ ಇದೆ. ಆ ಹಿನ್ನೆಲೆಯಲ್ಲಿ ನಮ್ಮ ಜಿಲ್ಲಾಡಳಿತ ಸಜ್ಜಾಗಿದೆ.
50 ಚಿಕ್ಕ ಮಕ್ಕಳ ವೆಂಟಿಲೇಟರ್ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಡಿಹೆಚ್ಒ ಡಾ. ಲಿಂಗರಾಜು ಹೇಳಿದ್ದಾರೆ.