ಇಸ್ಲಾಮಾಬಾದ್: ಆರ್ಥಿಕ ದಿವಾಳಿಯಲ್ಲಿ ಸಿಲುಕಿ ನೆರೆಯ ಪಾಕ್ ಒದ್ದಾಡುತ್ತಿದ್ದು, ಇದರ ಮಧ್ಯೆ ಅಲ್ಲಿನ ನಿವಾಸಿಗಳಿಗೆ ತಮ್ಮ ಸಂಪತ್ತು ಘೋಷಣೆ ಮಾಡಿ ಜೂನ್ 30ರೊಳಗೆ ತೆರಿಗೆ ಭರಿಸುವಂತೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿಕೊಂಡಿದ್ದಾರೆ.
ನಾಳೆ ಪಾಕಿಸ್ತಾನದ ಬಜೆಟ್ ಮಂಡನೆಯಾಗಲಿದ್ದು, ಅದಕ್ಕೂ ಮುನ್ನಾದಿನವಾದ ಇಂದು ಸಚಿವ ಸಂಪುಟ ಸಭೆ ನಡೆಸಿ, ಈ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಾಕ್ನಲ್ಲಿ 20 ಕೋಟಿ ಜನರಲ್ಲಿ ಕೇವಲ 14 ಲಕ್ಷ ಜನರು ಟ್ಯಾಕ್ಸ್ ತುಂಬುತ್ತಿದ್ದಾರೆ. ಹೀಗಾಗಿ ಪಾಕ್ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.
ಸಂಪತ್ತು ಘೋಷಣೆ ಯೋಜನೆಯಲ್ಲಿ ನೀವು ಭಾಗಿಯಾಗಿ ಸರ್ಕಾರಕ್ಕೆ ಸಹಾಯ ಮಾಡುವಂತೆ ಇಮ್ರಾನ್ ಖಾನ್ ಮನವಿ ಮಾಡಿಕೊಂಡಿದ್ದು, ನಿಮ್ಮ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಈ ನಿರ್ಧಾರಕ್ಕೆ ಕೈಜೋಡಿಸಿ ಎಂದು ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದ್ದು, ನೀವೆಲ್ಲರೂ ದೇಶದ ಅಭಿವೃದ್ಧಿಗಾಗಿ ಕೊಡುಗೆ ನೀಡಬೇಕಾಗಿದ್ದು, ಬಲಿಷ್ಠ ಪಾಕಿಸ್ತಾನ ನಿರ್ಮಾಣಕ್ಕಾಗಿ ಆರ್ಥಿಕವಾಗಿ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.